ಹಥ್ರಾಸ್ ಅತ್ಯಾಚಾರ ಘಟನೆಗೆ ಆಕ್ರೋಶ | ವಾಲ್ಮೀಕಿ ಸಮುದಾಯದ 236 ಮಂದಿಯಿಂದ ಬೌದ್ಧ ಧಮ್ಮ ಸ್ವೀಕಾರ

Prasthutha|

►► ರಾಜರತ್ನ ಅಂಬೇಡ್ಕರ್ ನೇತೃತ್ವದಲ್ಲಿ ಗಾಝಿಯಾಬಾದ್ ನಲ್ಲಿ ದಲಿತರಿಂದ ಮಹತ್ವದ ನಿರ್ಧಾರ

- Advertisement -

ಗಾಝಿಯಾಬಾದ್ : ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ವಾಲ್ಮೀಕಿ ಸಮುದಾಯದ ಹದಿಹರೆಯದ ಯುವತಿಯ ಭೀಕರ ಅತ್ಯಾಚಾರ ಮತ್ತು ಬರ್ಬರ ಹತ್ಯೆಯ ಬಳಿಕ, ಆಕ್ರೋಶಿತರಾಗಿರುವ ವಾಲ್ಮೀಕಿ ಸಮುದಾಯದ 236 ಮಂದಿ ಬೌದ್ಧ ಧಮ್ಮ ಸ್ವೀಕರಿಸಿದ್ದಾರೆ. ಗಾಝಿಯಾಬಾದ್ ನ ಕರೇರಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಅವರ ಸಮ್ಮುಖದಲ್ಲಿ ಈ ಧಮ್ಮ ಸ್ವೀಕಾರ ಕಾರ್ಯಕ್ರಮ ನಡೆದಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು 64 ವರ್ಷಗಳ ಹಿಂದೆ ಮುಂಬೈಯಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಯೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ 236 ವಾಲ್ಮೀಕಿಗಳು ಬೌದ್ಧ ಧಮ್ಮ ಸ್ವೀಕರಿಸಿದರು.

- Advertisement -

ತಮ್ಮ ಗ್ರಾಮದಲ್ಲಿ ಚೌಹಾಣ್ ಸಮುದಾಯದಿಂದ ತಮಗೆ ಜಾತಿ ತಾರತಮ್ಯದ ದೌರ್ಜನ್ಯ ನಡೆಯುತ್ತಿದೆ. ಗ್ರಾಮದಲ್ಲಿ 5,000 ಚೌಹಾಣರ ಜನಸಂಖ್ಯೆಯಿದ್ದು, 2,000 ವಾಲ್ಮೀಕಿಗಳಿದ್ದಾರೆ. ಇನ್ನುಳಿದವರು ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರು.

ಹಥ್ರಾಸ್ ದಲಿತ ಯುವತಿ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ ರೀತಿ ಕಂಡು ತಮಗೆ ಸಿಎಂ ಯೋಗಿ ಆದಿತ್ಯನಾಥ್ ಸರಕಾರದ ಮೇಲೆ ಎಲ್ಲಾ ವಿಶ್ವಾಸ ಕಳೆದು ಹೋಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವರು ತಿಳಿಸಿದ್ದಾರೆ.

“ಹಿಂದೂಗಳು ನಮ್ಮನ್ನು ತಮ್ಮವರೆಂದು ಒಪ್ಪಿಕೊಳ್ಳುವುದಿಲ್ಲ. ಮುಸ್ಲಿಮರು ಎಂದಿಗೂ ನಮ್ಮನ್ನು ಸ್ವೀಕರಿಸುವುದಿಲ್ಲ. ಸರಕಾರ ನಮ್ಮನ್ನು ಒಪ್ಪುವುದಿಲ್ಲ ಮತ್ತು ನಮಗೆ ಯಾವುದೇ ಸಹಾಯ ಮಾಡುವುದಿಲ್ಲ ಎಂಬುದು ನಮಗೆ ಅರಿವಾಗಿದೆ. ಬೇರೆ ಯಾವ ದಾರಿ ನಮಗೆ ಉಳಿದಿದೆ?’’ ಎಂದು ಧಮ್ಮ ಸ್ವೀಕಾರ ಮಾಡಿದ 27 ವರ್ಷದ ಯುವಕ ಪವನ್ ವಾಲ್ಮೀಕಿ ಪ್ರಶ್ನಿಸುತ್ತಾರೆ.

ಹಥ್ರಾಸ್ ದಲಿತ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಚಿಂದಿ ಆಯುವ ಕೆಲಸ ಮಾಡುವ 65 ವರ್ಷದ ರಜ್ಜೋ ವಾಲ್ಮೀಕಿ ಆಕ್ರೋಶ ವ್ಯಕ್ತಪಡಿಸುತ್ತಾರೆ. “ನಿರ್ಭಯಾಗೆ ದೆಹಲಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗಿತ್ತು ಮತ್ತು ಮಾಧ್ಯಮಗಳಲ್ಲಿ ಆಕೆಯ ಜಾತಿಯ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಆದರೆ, ನಮ್ಮ ಮಗಳ ಬಗ್ಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ಪೊಲೀಸರು, ವೈದ್ಯರು ಆಕೆಯ ಮೃತದೇಹಕ್ಕೆ ಯಾವುದೇ ಗೌರವ ಸಲ್ಲಿಸಲಿಲ್ಲ. ಮಾಧ್ಯಮಗಳು ಯಾಕೆ ಆಕೆಯ ಕುಟುಂಬಕ್ಕೆ ಕಿರುಕುಳ ನೀಡುತ್ತಿವೆ? ನಾವು ‘ಬೇರೆಯವರು’ ಎಂಬುದನ್ನು ನಂಬುವಂತೆ ಮಾಡಲಾಗುತ್ತಿದೆ, ನೀವು ಪ್ರತಿಯೊಂದು ವಿಷಯದಲ್ಲಿ ನಮ್ಮ ಜಾತಿಯ ಕೀಳು ಸ್ಥಾನಮಾನವನ್ನು ಎಳೆ ತರುತ್ತೀರಿ’’ ಎಂದು ರಜ್ಜೊ ಆಕ್ರೋಶ ವ್ಯಕ್ತಪಡಿಸುತ್ತಾರೆ.

Join Whatsapp