ಬೆಂಗಳೂರು: ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ, ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ತಂಡ 37- 33 ಅಂಕಗಳ ಅಂತರದಲ್ಲಿ ಹಾಲಿ ಚಾಂಪಿಯನ್ನರಿಗೆ ಮೊದಲ ಸೋಲಿನ ಕಹಿಯುಣಿಸಿತು.
ಡೆಲ್ಲಿ ತಂಡದ ನವೀನ್ ಕುಮಾರ್ ಏಕಾಂಗಿಯಾಗಿ 13 ಅಂಕಗಳನ್ನು ಗಳಿಸಿದರೂ ಸಹ, ಹೋರಾಟ ಚಾಲ್ತಿಯಲ್ಲಿರಿಸಿದ ಪಾಟ್ನಾ, ಟೂರ್ನಿಯಲ್ಲಿ ಮೊದಲ ಗೆಲುವಿನ ಸಂಭ್ರಮವನ್ನಾಚರಿಸಿತು. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿರುವ ಡೆಲ್ಲಿ, 26 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪುಣೇರಿ ಪಲ್ಟಾನ್ ತಂಡದ ಸ್ಟಾರ್ ರೈಡರ್ ಅಸ್ಲಮ್, 6 ಪಂದ್ಯಗಳಲ್ಲಿ 55 ಅಂಕ ಗಳಿಸಿ ರೈಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಯು ಮುಂಬಾ- ಹರ್ಯಾಣ ಸ್ಟೀಲರ್ ತಂಡಗಳ ನಡುವಿನ ಪಂದ್ಯವು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ರೋಚಕ ಹಣಾಹಣಿಯಲ್ಲಿ ಯು ಮುಂಬಾ ಕೇವಲ ಒಂದು ಅಂಕದ ಅಂತರದಲ್ಲಿ (32- 31) ಹರ್ಯಾಣ ಸ್ಟೀಲರ್‌ಗೆ ಸೋಲುಣಿಸಿತು. ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಉಭಯ ತಂಡಗಳು ತಲಾ 13 ಅಂಕಗಳನ್ನು ಗಳಿಸಿತ್ತು. ಟೂರ್ನಿಯ ತನ್ನ 5ನೇ ಪಂದ್ಯದಲ್ಲಿ ಮುಂಬಾ 3ನೇ ಜಯ ಸಾಧಿಸಿದರೆ, ಹರ್ಯಾಣ 3ನೇ ಸೋಲನುಭವಿಸಿತು.
ಪುಣೇರಿ ಪಲ್ಟಾನ್‌ಗೆ ಗೆಲುವು
ಪುಣೇರಿ ಪಲ್ಟಾನ್- ಬೆಂಗಾಲ್ ವಾರಿಯರ್ಸ್ ನಡುವಿನ ದ್ವಿತೀಯ ಪಂದ್ಯವೂ ಸಹ ತೀವ್ರ ಪೈಪೋಟಿಯಿಂದ ಕೂಡಿತ್ತು. ಪಂದ್ಯದುದ್ದಕ್ಕೂ ಎರಡು ತಂಡಗಳೂ ಸಮಬಲದ ಹೋರಾಟ ನಡೆಸಿದರಾದರೂ, ಕೊನೆಯ ಹಂತದಲ್ಲಿ ತಿರುಗಿ ಬಿದ್ದ ಪಲ್ಟಾನ್ 27- 25 ಅಂಕಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.