ಸುಳ್ಯ | ಬಂದೂಕು ತಯಾರಿಕಾ ಘಟಕಕ್ಕೆ ದಾಳಿ : ನಾಲ್ವರ ಬಂಧನ, ಬಂದೂಕುಗಳ ವಶ !

Prasthutha|

►ದಿವಾಕರ ಆಚಾರಿ, ಕಾರ್ತಿಕ್, ಅಶೋಕ್, ಚಂದನ್ ಬಂಧಿತರು !

ಸುಳ್ಯ : ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುವ ಪ್ರಕರಣವೊಂದನ್ನು ದಕ್ಷಿಣ ಕನ್ನಡದ ಸುಳ್ಯ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕಿನ ಇಬ್ಬರ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೋವಿಯನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ದಿವಾಕರ ಆಚಾರಿ ಸಿ.ಎಚ್, ಕಡಬ ತಾಲೂಕು ಸುಬ್ರಹ್ಮಣ್ಯದ ಕಾರ್ತಿಕ್ , ಕಡಬ ತಾಲೂಕು ಬಿಳಿನೆಲೆ ಗ್ರಾಮದ  ಅಶೋಕ್ ಎ ಹಾಗೂ ಹಾಸನ ಹೊಸಕೊಪ್ಪಲು ಕಿರ್ಸಾನ್ ಕಾಲೋನಿ ಚರ್ಚ್ ಹತ್ತಿರದ ಚಂದನ್  ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ದಿವಾಕರ ಆಚಾರಿಯವರು ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುವ ಉದ್ದೇಶದೊಂದಿಗೆ ತನ್ನ ಬಳಿ ಇಟ್ಟುಕೊಂಡಿದ್ದ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಯ ಮನೆಯ ಬಳಿ ಕಬ್ಬಿಣದ ಕೆಲಸ ಮಾಡುವ ಶೆಡ್‌ಗೆ ದಾಳಿ ಮಾಡಿದ್ದ ಪೊಲೀಸರು ಆರೋಪಿಯಲ್ಲಿದ್ದ ಒಂದು ಬಂದೂಕು ಹಾಗೂ ಒಂದು ಸಜೀವ ತೋಟೆಯನ್ನು ಸ್ವಾಧೀನಪಡಿಸಿಕೊಂಡಿದ್ದರು. ಬಳಿಕ ತನಿಖೆ ಸಂದರ್ಭ ಆರೋಪಿಯು ಅಕ್ರಮ ಬಂದೂಕು ತಯಾರಿಸಿ ಇತರ ಕೆಲವರಿಗೆ ಮಾರಾಟ ಮಾಡಿದ್ದಾಗಿ ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಮುಂದುವರಿಸಿ ಕಾರ್ತಿಕ್, ಅಶೋಕ ಮತ್ತು ಚಂದನ್ ಅವರ ವಶದಲ್ಲಿದ್ದ ಅಕ್ರಮ ಕೋವಿಯನ್ನು ಪತ್ತೆ ಮಾಡಿದ್ದಾರೆ.

- Advertisement -