ಮೋಹನ್ ಭಾಗವತ್ ರ ಜನಸಂಖ್ಯಾ ನಿಯಂತ್ರಣ ಹೇಳಿಕೆಗೆ ಪಿಣರಾಯಿ ವಿಜಯನ್, ಅಸದುದ್ದೀನ್ ಉವೈಸಿ ಆಕ್ಷೇಪ

Prasthutha|

ನವದೆಹಲಿ: ಇತ್ತೀಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜನಸಂಖ್ಯಾ ನಿಯಂತ್ರಣ ನೀತಿ ಕುರಿತು ನೀಡಿರುವ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್, ಭಾಗವತ್ ಅವರ ಹೇಳಿಕೆಯು ಇಸ್ಲಾಮೋಫೋಬಿಕ್ ಮತ್ತು ಅಲ್ಪಸಂಖ್ಯಾತರ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಹಿಂದೂಗಳು ಶೀಘ್ರದಲ್ಲೇ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಸುಳ್ಳನ್ನು ಹರಡುವ ಮೂಲಕ ಭಾಗವತ್ ಅವರು ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂದು ವಿಜಯನ್ ಫೇಸ್ಬುಕ್ ಪೋಸ್ಟ್’ನಲ್ಲಿ ತಿಳಿಸಿದ್ದಾರೆ.

- Advertisement -

ಇದು ಸಂಘಪರಿವಾರದ ಹಳೆಯ ಅಸ್ತ್ರವಾಗಿದ್ದು, ಭಾಗವತ್ ಅವರು ಮತ್ತೆ ದ್ವೇಷದ ಸಾಧನವನ್ನು ಪ್ರಯೋಗಿಸುತ್ತಿದ್ದಾರೆ. ಆರೆಸ್ಸೆಸ್ ಧರ್ಮದ ಆಧಾರದಲ್ಲಿ ಪೌರತ್ವವನ್ನು ಮರು ರೂಪಿಸಲು ಪ್ರಯತ್ನಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಅವರು ಕಿಡಿಕಾರಿದರು

ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಜನಸಂಖ್ಯೆ ನಿಯಂತ್ರಣದ ಅಗತ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಡಿ.ಎನ್.ಎ ಹೊಂದಿದ್ದರೆ ಅಸಮತೋಲನ ಎಲ್ಲಿದೆ?. ನಾವು ಈಗಾಗಲೇ ಬದಲಿ ದರವನ್ನು ಸಾಧಿಸಿರುವುದರಿಂದ ಜನಸಂಖ್ಯೆಯ ನಿಯಂತ್ರಣದ ಅಗತ್ಯವಿಲ್ಲ. ವಯೋವೃದ್ಧರ ಜನಸಂಖ್ಯೆ ಮತ್ತು ವಯೋವೃದ್ಧರನ್ನು ಬೆಂಬಲಿಸಲು ಸಾಧ್ಯವಾಗದ ನಿರುದ್ಯೋಗಿ ಯುವಕರ ಜನಸಂಖ್ಯಾ ಪ್ರಮಾಣ ಚಿಂತೆಗೀಡು ಮಾಡಿದೆ. ಮುಸ್ಲಿಮರ ಜನಸಂಖ್ಯಾ ಪ್ರಮಾಣದಲ್ಲಿ ತೀವ್ರ ಕುಸಿತವನ್ನು ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಸರಾ ಜಾಥಾದಲ್ಲಿ ಮಾತನಾಡಿದ ಭಾಗವತ್, ಭಾರತವು ಜನಸಂಖ್ಯಾ ನೀತಿಯನ್ನು ಹೊಂದಬೇಕು ಮತ್ತು ಅದು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ತಿಳಿಸಿದ್ದರು.



Join Whatsapp