‘ಮಹಾರಾಷ್ಟ್ರ ಎಷ್ಟು ದೊಡ್ಡದಿದೆಯೆಂದು ನಿಮಗೆ ಗೊತ್ತೇ’ ? ಶಿವಸೇನೆ ಸರ್ಕಾರವನ್ನು ವಜಾಗೊಳಿಸಬೇಕೆಂಬ ಅರ್ಜಿಯನ್ನು ತಳ್ಳಿ ಹಾಕಿದ ಸುಪ್ರೀಂ

Prasthutha News

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪೂತ್ ಅವರ ಆತ್ಮಹತ್ಯೆಯ ಘಟನೆಯನ್ನು ಉಲ್ಲೇಖಿಸಿಕೊಂಡು  ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್ ಎಸ್ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ, “ ಮಹಾರಾಷ್ಟ್ರ ಎಷ್ಟು ದೊಡ್ಡದಿದೆಯೆಂದು ತಿಳಿದಿದೆಯೇ? ಕೇವಲ ಮುಂಬೈಯನ್ನೇ ಇಡೀ ಮಹಾರಾಷ್ಟ್ರ ಎಂಬಂತೆ ಬಿಂಬಿಸುವುದು ಸರಿಯಲ್ಲ” ಎಂದು ಅರ್ಜಿಯನ್ನು ತಳ್ಳಿ ಹಾಕುತ್ತಾ ಸುಪ್ರೀಂ ಪೀಠ ಅಭಿಪ್ರಾಯಪಟ್ಟಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠದ ಮುಂದೆ ಈ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಾಗ, ಸುಪ್ರೀಂ ಕೋರ್ಟ್ ನಿಂದ ಈ ರೀತಿಯ ಅರ್ಜಿಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. “ಒಬ್ಬ ಅರ್ಜಿದಾರನಾಗಿ, ನೀವು ರಾಷ್ಟ್ರಪತಿಗಳನ್ನು ಸಂಪರ್ಕಿಸಲು ಸ್ವತಂತ್ರರು, ಆದರೆ ಇಲ್ಲಿಗೆ ಬರಬೇಡಿ” ಎಂದು ಹೇಳಿದೆ.  

ಸಾಂವಿಧಾನಿಕ ಮತ್ತು ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ.  ನಟ ಸುಶಾಂತ್ ಸಿಂಗ್ ರಾಜ್ಪೂತ್ ಅವರ ಸಾವು ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಆಸ್ತಿಯನ್ನು ನೆಲಸಮ ಗೊಳಿಸಿದ್ದನ್ನು  ಇದಕ್ಕೆ ಉದಾಹರಣೆಯಾಗಿ ಅರ್ಜಿದಾರರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಬ್ಡೆ, “ಯಾರೋ ಬಾಲಿವುಡ್ ನಟ ಸತ್ತಿರುವುದರಿಂದ ರಾಜ್ಯದಲ್ಲಿ ಸಂವಿಧಾನ ಪಾಲನೆ ಮಾಡುತ್ತಿಲ್ಲ ಎಂದು ನೀವು ಹೇಳುತ್ತಿದ್ದೀರಾ? ನೀವು ಉಲ್ಲೇಖಿಸಿರುವ ಎಲ್ಲಾ ಪ್ರಕರಣಗಳು ಮುಂಬೈಯಲ್ಲೇ ನಡೆದಿದೆ. ಮಹಾರಾಷ್ಟ್ರ ಎಷ್ಟು ದೊಡ್ಡದಿದೆ ಎಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ ಸುಪ್ರೀಂ ಪೀಠ ವಿಕ್ರಂ ಅವರ ಅರ್ಜಿಯನ್ನು ತಳ್ಳಿ ಹಾಕಿದೆ


Prasthutha News