ತ್ರಿವಳಿ ತಲಾಖ್ ಪ್ರಕರಣ ಅನಿರ್ದಿಷ್ಟಾವಧಿ ಮುಂದೂಡಿದ ದೆಹಲಿ ಹೈಕೋರ್ಟ್ | ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿಗೆ ಕಾಯಲು ನಿರ್ದೇಶನ

Prasthutha|

ನವದೆಹಲಿ : ತ್ರಿವಳಿ ತಲಾಖ್ ವಿಷಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗೆ ದೆಹಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ವರೆಗೆ ಅನಿರ್ದಿಷ್ಟಾವಧಿ ಮುಂದೂಡಿದೆ. ತ್ರಿವಳಿ ತಲಾಖ್ ಅನೂರ್ಜಿತ ಮತ್ತು ಕಾನೂನು ಬಾಹಿರ ಎಂದು ಘೋಷಿಸಿರುವ ನಿರ್ಧಾರ ವಿಚಾರಣೆ ಹಂತದಲ್ಲಿದೆ ಎಂದಾಕ್ಷಣ, ಅಂತಹ ಕ್ರಿಯೆ ಕಾನೂನಿನಲ್ಲಿ ಅಪರಾಧವೆಂಬುದಾಗಿ ಪರಿಗಣಿಸಿಲ್ಲ ಎಂದರ್ಥವಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ನ್ಯಾ. ವಿಪಿನ್ ಸಂಘಿ ಮತ್ತು ನ್ಯಾ. ರಜನೀಶ್ ಭಟ್ನಾಗರ್ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ

- Advertisement -

ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಕಲಂ 4 ಅಸಂವಿಧಾನಿಕ, ತಾರತಮ್ಯವುಳ್ಳದ್ದು, ಮುಸ್ಲಿಂ ಪುರುಷರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತದೆ ಎಂದು ಘೋಷಿಸುವಂತೆ ಕೋರಿದ ಅರ್ಜಿಗೆ ಸಂಬಂಧಿಸಿದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಿಟ್ ಅರ್ಜಿ ವಿಚಾರಣೆಗೆ ಬಾಕಿಯಿರುವಾಗಲೇ ಕಾಯ್ದೆಯ ಕಲಂ 4ರನ್ವಯ ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸದಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸುವಂತೆಯೂ ಅರ್ಜಿದಾರ ಮನವಿ ಮಾಡಿದ್ದಾರೆ. ಅರ್ಜಿದಾರರ ಮನವಿ ಪಿಐಎಲ್ ಮಾದರಿಯಲ್ಲಿ ಇಲ್ಲ ಎಂದು ಪರಿಗಣಿಸಿರುವ ಕೋರ್ಟ್, ಅರ್ಜಿದಾರರಿಗೆ ಯಾವುದೇ ಪರಿಹಾರ ಘೋಷಿಸಲಿಲ್ಲ.

ಆದರೆ, ವಿಷಯಕ್ಕೆ ಸಂಬಂಧಿಸಿ ಸಾಂವಿಧಾನಿಕ ಮಾನ್ಯತೆ ಕುರಿತಂತೆಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿರುವುದರಿಂದ, ಈ ವಿಷಯದಲ್ಲಿ ಮುಂದುವರಿಯಲು ತೀರ್ಪು ಬರುವವರೆಗೂ ಕಾಯಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಸಂಬಂಧಪಟ್ಟ ಕೋರ್ಟ್ ಈ ಕಾನೂನನ್ನು ಅನೂರ್ಜಿತ ಅಥವಾ ಅಸಂವಿಧಾನಿಕ ಎಂದು ತೀರ್ಪು ನೀಡುವವರೆಗೂ ಇದು ಊರ್ಜಿತವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಮುಸ್ಲಿಂ ಪತಿಯು ತನ್ನ ಪತ್ನಿ ತ್ರಿವಳಿ ತಲಾಖ್ ನೀಡುವ ಹಳೆಯ ಸಂಪ್ರದಾಯವನ್ನು ಪ್ರೋತ್ಸಾಹಿಸದಿರಲು ಕಲಂ 4 ಉದ್ದೇಶಿಸಿರುವಂತಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

- Advertisement -

ಪ್ರಕರಣವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಪಕ್ಷಗಾರರಿಗೆ ಈ ಸಂಬಂಧ ಕೋರ್ಟ್ ಗೆ ಬರಲು ಅನುಮತಿ ನೀಡಿ ನ್ಯಾಯಪೀಠ ತೀರ್ಪು ನೀಡಿದೆ.

Join Whatsapp