ಕಳೆದ ವರ್ಷದ ಸಿಎಎ ವಿರೋಧಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ನ ಯಾವುದೇ ಪಾತ್ರವಿಲ್ಲ : SIT

Prasthutha|

ಗುವಾಹತಿ : ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ)ದ ಯಾವುದೇ ಪಾತ್ರವಿರಲಿಲ್ಲ ಎಂದು ಘಟನೆಯ ತನಿಖೆಗೆ ನಿಯೋಜಿಸಲಾಗಿದ್ದ ಅಸ್ಸಾಂ ಪೊಲೀಸರ ವಿಶೇಷ ತನಿಖಾ ತಂಡದ ಪತ್ತೆಹಚ್ಚಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನರು ಹಠಾತ್ ಆಕ್ರೋಶಕ್ಕೊಳಗಾಗಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದರು ಎಂಬುದು ತನಿಖಾ ತಂಡಕ್ಕೆ ಸ್ಪಷ್ಟವಾಗಿದೆ.

- Advertisement -

ಡಿ.11ರಂದು ಜನತಾ ಭವನ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಿಎಫ್ ಐ ಮತ್ತು ಕಾಂಗ್ರೆಸ್ ಸದಸ್ಯರ ಪಾತ್ರವಿದೆ ಎಂದು ಅಸ್ಸಾಂನ ಬಿಜೆಪಿ ಸರಕಾರ ಆಪಾದಿಸಿತ್ತು.

ರಾಜ್ಯ ರಾಜಧಾನಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಪಿಎಫ್ ಐಯ ಯಾವುದೇ ಪಾತ್ರಗಳಿರುವ ಬಗ್ಗೆ ನಮಗೆ ಕಂಡುಬಂದಿಲ್ಲ. ಪ್ರತಿಭಟನೆ ಸಂಪೂರ್ಣವಾಗಿ ಸಿಎಎ ವಿರೋಧಿ ಪ್ರತಿಭಟನಕಾರರ ನೇತೃತ್ವದಲ್ಲಿ ನಡೆದಿತ್ತು’’ ಎಂದು ವಿಶೇಷ ತನಿಖಾ ತಂಡದ ಸದಸ್ಯರಾದ ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -

ತನಿಖೆ ಬಹುತೇಕ ಪೂರ್ಣಗೊಂಡಿದೆ. ನಿಯಮಗಳ ಪ್ರಕಾರ ಶೀಘ್ರದಲ್ಲೇ ಅಂತಿಮ ವರದಿ ಸಲ್ಲಿಕೆಯಾಗಲಿದೆ. ಖಚಿತವಾದ ದಿನಾಂಕ ಹೇಳಲು ಸಾಧ್ಯವಿಲ್ಲ, ಆದರೆ ಶೀಘ್ರದಲ್ಲೇ ಅದು ಸಲ್ಲಿಕೆಯಾಗಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ತನಿಖಾಧಿಕಾರಿಗಳು ಬೇರೊಂದು ಪ್ರಕರಣದ ತನಿಖೆಯಲ್ಲಿ ನಿರತರಾಗಿದ್ದುದರಿಂದ ಈ ಪ್ರಕರಣದ ತನಿಖೆಗೆ ವಿಳಂಬವಾಗಿದೆ. ರಾಜ್ಯಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳ ಸಾಕ್ಷ್ಯಗಳನ್ನು ಎಸ್ ಐಟಿ ಸಂಗ್ರಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಡಿ.11ರಂದು ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ವಿಧಾನಸಭೆಯ ಮುಂದೆ ಸಾವಿರಾರು ಜನರು ಮುತ್ತಿಗೆ ಹಾಕಿದ್ದರು. ಮರು ದಿನ ಪೊಲೀಸರು ನಡೆಸಿದ ಗೋಲಿಬಾರ್ ಗೆ ನಾಲ್ವರು ಮೃತಪಟ್ಟಿದ್ದರು. ಡಿ.17ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಸರಕಾರದ ಹಿರಿಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಿಎಫ್ ಐ ಪಾತ್ರವಿತ್ತು ಎಂದು ದೂಷಿಸಿದ್ದರು. 200ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು, 273 ಮಂದಿಯ ಬಂಧನ ನಡೆದಿತ್ತು. ರಾಜ್ಯಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ವಶಕ್ಕೆ ಪಡೆಯಲಾಗಿತ್ತು.

ಪಿಎಫ್ ಐ ಅಸ್ಸಾಂ ಘಟಕದ ರಾಜ್ಯಾಧ್ಯಕ್ಷ ಅಮೀನುಲ್ ಹಕ್ ಸೇರಿದಂತೆ, ಕೆಎಂಎಂಎಸ್ ನಾಯಕ ಅಖಿಲ್ ಗೊಗೊಯಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಮರುಲ್ ಇಸ್ಲಾಂ ಚೌಧರಿ ಸೇರಿದಂತೆ ನೂರಾರು ಮುಖಂಡರನ್ನು ಬಂಧಿಸಲಾಗಿತ್ತು.

Join Whatsapp