PFI ಕಾರ್ಯಕರ್ತರಿಂದ ಇಲ್ಲಿವರೆಗೆ 1,837 ಕೋವಿಡ್ -19 ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರ

Prasthutha|

ಬೆಂಗಳೂರು : ರಾಜ್ಯದ 28 ಜಿಲ್ಲೆಗಳಲ್ಲಿ ಇಲ್ಲಿ ವರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸುಮಾರು 1,837 ಕೋವಿಡ್ – 19 ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತಿಳಿಸಿದ್ದಾರೆ.

- Advertisement -

ಅಕ್ಟೋಬರ್ ತಿಂಗಳ ಅಂತ್ಯದ ವರೆಗೆ ತಮ್ಮ ಸಂಘಟನೆಯ ಕಾರ್ಯಕರ್ತರು ಇಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಸೋಂಕಿನ ಭೀತಿಯಿಂದ ಮೃತದೇಹಗಳಿಗೆ ಕನಿಷ್ಠ ಗೌರವವನ್ನೂ ಕೊಡದೆ ಎಲ್ಲೆಂದರಲ್ಲಿ ಎಸೆಯುವ, ಸಾಮೂಹಿಕ ದಫನ ಘಟನೆಗಳು ವರದಿಯಾಗಿದ್ದವು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಹಿಂದು, ಮುಸ್ಲಿಂ, ಕ್ರೈಸ್ತರೆಂಬ ಯಾವುದೇ ಭೇದವಿಲ್ಲದೆ ಕೋವಿಡ್ ಬಾಧಿತ ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಕೈಜೋಡಿಸಿದರು ಎಂದು ಅವರು ತಿಳಿಸಿದ್ದಾರೆ.

- Advertisement -

ಕರ್ನಾಟಕದಲ್ಲಿ ಕೋವಿಡ್ ಸಾವುಗಳು ಹೆಚ್ಚಾಗಲಾರಂಭಿಸಿದಾಗ ಸಂಘಟನೆಯು, ವಿವಿಧೆಡೆಗಳಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತರಬೇತಿ ಪಡೆದ ತನ್ನ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಹಲವು ತಿಂಗಳ ಬಳಿಕವೂ ಕೊರೋನ ಪಿಡುಗು ನಿಯಂತ್ರಣಕ್ಕೆ ಬಂದಿಲ್ಲ. ದಿನಂಪ್ರತಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಮುಂದುವರಿದಿದೆ. ಕೊರೋನ ಸಂಪೂರ್ಣ ಹತೋಟಿಗೆ ಬರುವ ವರೆಗೂ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ತಮ್ಮ ಈ ಸೇವೆಯನ್ನು ಮುಂದುವರಿಸಲಿದ್ದಾರೆ. ಅದೇ ರೀತಿ ಕೊರೋನ ನಿಯಂತ್ರಣಕ್ಕಾಗಿ ಸಾರ್ವಜನಿಕರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅಗತ್ಯವಾಗಿ ಪಾಲಿಸಬೇಕೆಂದು ನಾಸಿರ್ ಪಾಶ ವಿನಂತಿಸಿದ್ದಾರೆ.

Join Whatsapp