ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ಸತ್ತಾರ್ ಅವರು ಸೆಪ್ಟೆಂಬರ್ 23 ರಂದು ನೀಡಿದ ಕೇರಳ ಹರತಾಳದ ವೇಳೆ ಆಗಿದೆ ಎನ್ನಲಾದ ಆಸ್ತಿ ಹಾನಿಯ ಪ್ರಮಾಣದ ಬಗ್ಗೆ ವರದಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪಿಎಫ್ ಐ ವಿರುದ್ಧ ಕಳೆದ ತಿಂಗಳು ಪ್ರಾರಂಭಿಸಿದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಿತು.
ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನಿಯಾಝ್ ಸಿ.ಪಿ.ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿ, ಪ್ರಕರಣವನ್ನು ನವೆಂಬರ್ 7 ಕ್ಕೆ ಮುಂದೂಡಿದೆ. ಪ್ರತಿವಾದಿಗಳ ಆಸ್ತಿಗಳ ವಿರುದ್ಧ ಪ್ರಾರಂಭಿಸಲಾದ ವಸೂಲಾತಿಗಳ ಬಗ್ಗೆ ವಿವರಗಳನ್ನು ಅಫಿಡವಿತ್ ನಲ್ಲಿ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ ಪೊಲೀಸರು ಮಾಡಿದ ಬಂಧನಗಳು ಮತ್ತು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಜಾಮೀನು ಅರ್ಜಿಗಳ ಬಗ್ಗೆಯೂ ನ್ಯಾಯಾಲಯವು ವಿವರಗಳನ್ನು ಕೇಳಿದೆ.
ಎನ್ ಐಎ ತನ್ನ ನಾಯಕರನ್ನು ಬಂಧಿಸಿದ ನಂತರ ಪಿಎಫ್ ಐ ಕಳೆದ ತಿಂಗಳು ರಾಜ್ಯದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹರತಾಳಕ್ಕೆ ಕರೆ ನೀಡಿತ್ತು.