ಮೇಘಾಲಯ ಮುಖ್ಯಮಂತ್ರಿ ನಿವಾಸದ ಮೇಲೆ ದುಷ್ಕರ್ಮಿಗಳಿಂದ ದಾಳಿ: ಮುಂದುವರಿದ ಕರ್ಫ್ಯೂ

Prasthutha|

ಶಿಲ್ಲಾಂಗ್: ಮೇಘಾಲಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಖ ಮರೆಮಾಚಿದ್ದ ದುಷ್ಕರ್ಮಿಗಳು ಆಗಸ್ಟ್ 15 ರ ತಡರಾತ್ರಿ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ಖಾಸಗಿ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಯಾವುದೇ ಹಾನಿಯಾಗಿಲ್ಲವೆಂದು ಮೂಲಗಳು ಸ್ಪಷ್ಟಪಡಿಸಿವೆ.

- Advertisement -

ಮಾತ್ರವಲ್ಲ ಘಟನಾ ಸಂಬಂಧ ರಾಜ್ಯದೆಲ್ಲೆಡೆ ಹಿಂಸಾಚಾರ ಭುಗಿಲೆದ್ದಿದ್ದು, ಗೃಹ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಅಹಿತಕರ ಘಟನೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕರ್ಫ್ಯೂ ಹೇರಿ ಪರಿಸ್ಥಿತಿಯ ಹತೋಟಿಗೆ ಪ್ರಯತ್ನಿಸುತ್ತಿದೆ. ಮಾತ್ರವಲ್ಲದೆ 48 ಗಂಟೆಗಳ ಅವಧಿಗೆ ಇಂಟರ್ ನೆಟ್ ಮತ್ತು ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆಯೆಂದು ಸರ್ಕಾರ ಮೂಲಗಳು ಸ್ಪಷ್ಟಪಡಿಸಿವೆ.

ಆಗಸ್ಟ್ 13 ರ ಮುಂಜಾನೆ ಮಾಜಿ ಉಗ್ರರ ನಾಯಕ ಚೆರಿಸ್ಟರ್ ಫೀಲ್ಡ್ ತಂಗ್ ಕೀವ್ ನನ್ನು ಅವನ ನಿವಾಸದಲ್ಲಿ ಮೇಘಾಲಯ ಪೊಲೀಸರು ಎನ್ಕೌಂಟರ್ ನಲ್ಲಿ ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಉಂಟಾದ ಘರ್ಷಣೆಯಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಿಲ್ಲಾಂಗ್ ನಲ್ಲಿ ಘಟನೆ ವರದಿಯಾಗಿರುವುದು ಸಾರ್ವಜನಿಕರ ಆತಂತಕ್ಕೆ ಕಾರಣವಾಗಿದೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಆರ್. ಚಂದ್ರನಾಥನ್ ಅವರು ಮಾಜಿ ಉಗ್ರರ ನಾಯಕ ತಂಗ್ ಕೀವ್ ಎಂಬವನು ಪೊಲೀಸರು ಬಂಧಿಸಲು ಮುಂದಾದಾಗ ಆತ ಮಾರಾಕಾಯುಧ ದೊಂದಿಗೆ ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸಿದಾಗ ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ ಶಿಲ್ಲಾಂಗ್ ಪ್ರಯಾಣಿಸದಂತೆ ಅಸ್ಸಾಂ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಜಿ.ಪಿ ಸಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Join Whatsapp