ನವದೆಹಲಿ: 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(3)ರಂತೆ ಯಾವುದೇ ಬಗೆಯ ಎರಡು ವರ್ಷಗಳ ಜೈಲು ಶಿಕ್ಷೆಗೆ ಒಳಗಾದವರು ತಾವಾಗಿಯೇ ಅನರ್ಹಗೊಂಡು ಜನಪ್ರತಿನಿಧಿ ಸ್ಥಾನವನ್ನು ಕಳೆದುಕೊಳ್ಳುವುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತನವನ್ನು ಅನರ್ಹಗೊಳಿಸಿದಂತೆ ಮಾಡುವಾಗ ಅಪರಾಧ ಸಾಮಾನ್ಯವಾದುದೆ, ಅಸಾಮಾನ್ಯವಾದುದೆ, ಅಪರಾಧದ ಗಂಭೀರ ಸ್ವರೂಪ, ಅದರ ಗುಣ ಸ್ವಭಾವ, ಪರಿಣಾಮ ಯಾವುದನ್ನೂ ಪರಿಗಣಿಸದೆ ಕಾಯ್ದೆಯ ಪ್ರಯೋಗವೆನ್ನುವುದು ಸಹಜ ನ್ಯಾಯದ ನೀತಿಗಳಿಗೆ ವಿರೋಧವಾದುದಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಸಂವಿಧಾನದ 1951ರ ಜನಪ್ರತಿನಿಧಿ ಕಾಯ್ದೆಯ 8(3) ಹೇಳುವುದಕ್ಕೂ ಮತ್ತು ಸೆಕ್ಷನ್ 8(1), ಸೆಕ್ಷನ್ 8ಎ, 9, 9ಎ, 10, 10ಎ ಮತ್ತು 11ರ ನಡುವೆ ವಿರೋಧಾತ್ಮಕವಾದ ಅಂಶಗಳಿವೆ. ಕ್ಷೇತ್ರದ ಮತದಾರರ ಆಶಯ ಕಡೆಗಣಿಸಿ 8(3) ನೇರ ಅನರ್ಹಗೊಳಿಸುವುದು ಪ್ರಜಾಪ್ರಭುತ್ವದ ನೀತಿಗಳಿಗೆ ವಿರೋಧವಾದುದಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಆದರೆ 1951ರ ಅದೇ ಕಾಯ್ದೆಯ 8(1) ಸಂಸದರ ಅನರ್ಹತೆಯು ಅಪರಾಧದ ಗಂಭೀರತೆಯನ್ನು ಆಧರಿಸಿ ಅನರ್ಹತೆಯನ್ನು ಪ್ರತಿಪಾದಿಸುತ್ತದೆ. ಆದರೆ 8(3) ಎರಡು ವರ್ಷ ಶಿಕ್ಷೆ ಆದರೆ ನೇರ ಅನರ್ಹತೆ ಎನ್ನುತ್ತದೆ. ಆದರೆ ಇತರ ಸೆಕ್ಷನ್’ಗಳು ಅಪರಾಧದ ಪರಿಣಾಮ, ಗಂಭೀರತೆಯನ್ನು ಹೇಳುವುದರಿಂದ ಅನರ್ಹತೆಯ ಪ್ರಕ್ರಿಯೆಯನ್ನು ಒಂದೇ ವಿಧಿಯಡಿ ತೀರ್ಮಾನಿಸುವುದು ಹೇಗೆ ಸರಿ ಎಂದು ಅರ್ಜಿ ಪ್ರಶ್ನಿಸಿದೆ.
1951ರ ಕಾಯ್ದೆಯ ಆ ವಿಧಿಯ ನಿಜವಾದ ಅರ್ಥವು ಅತಿ ಹೀನವಾದ ಮತ್ತು ಅತ್ಯಂತ ಗಂಭಿರ ಅಪರಾಧ ಎಸಗಿದವರನ್ನು ಮಾತ್ರ ನೇರ ಅನರ್ಹಗೊಳಿಸಲು ಹೇಳಿದೆ ಎಂದು ಅರ್ಜಿ ಎತ್ತಿ ಹೇಳಿದೆ.
ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳ ಸದಸ್ಯತ್ವ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಕೆ
Prasthutha|