ಲಕ್ಷದ್ವೀಪದ ಹೊಸ ಆತಂಕ ಮತ್ತು ಆಘಾತ

Prasthutha: June 16, 2021

-ಪೇರೂರು ಜಾರು

ಮೂವತ್ತಾರು ದ್ವೀಪಗಳಲ್ಲಿ ಒಂದನ್ನು ಕಡಲ ಕೊರೆತ ನುಂಗಿದ್ದರಿಂದ ಲಕ್ಷದ್ವೀಪದ ಈಗಿರುವ ದ್ವೀಪಗಳ ಸಂಖ್ಯೆ ಬರೇ ಮೂವತ್ತೈದು. ಈ ಆಘಾತಾತಂಕಕ್ಕೆ ಹೊಸ ಸೇರ್ಪಡೆ ಕೇಂದ್ರ ಸರಕಾರ ಮತ್ತು ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್. ಇರುವ 32.62 ಚ.ಕಿ.ಮೀ ವಿಸ್ತೀರ್ಣದ ಒಟ್ಟು ಭೂಮಿಯಲ್ಲಿ ಇವರೆಷ್ಟು ನುಂಗುವರು ಇಲ್ಲವೇ ಕಾರ್ಪೊರೇಟ್‌ ಗಳಿಗೆ ಅಡವು ಇಡುವರು ಎಂಬುದು ಆತಂಕದ ಕಾರಣ.

ಜೀಬ್ರಾ ಮೀನು ತುಳುವರ ಚಿಪ್ಪರ್ ಜಾತಿಯ ಮೀನು ಇಲ್ಲಿನ ಗುರುತು ಜೀವಿ. ಹಾಗೆಯೇ ಗುರುತು ಮರ ದೀಗುಜ್ಜ. ನ್ಯೂಗಿನಿಯಾ, ಮಲಕು, ಪಿಲಿಪ್ಪೀನ್ಸ್ ಮೂಲದ ಇದನ್ನು ಇಲ್ಲಿ ಪರಿಚಯಿಸಿದವರು ಪೋರ್ಚುಗೀಸರು. ಬೇಯಿಸಿದಾಗ ಆಲೂಗಡ್ಡೆ ಪರಿಮಳದೊಡನೆ ಬ್ರೆಡ್‌ ನಂತೆ ಆಗುವುದರಿಂದ ಇದನ್ನು ಬ್ರೆಡ್ ಫ್ರೂಟ್ ಎಂದು ಕರೆದಿದ್ದಾರೆ. ಇಲ್ಲಿನ ಹಲವರು ಮೀನು ಮತ್ತು ಬೇಯಿಸಿದ ಇದನ್ನು ಉಂಡು ಇರುವುದೂ ಇದೆ.

ಎರಡು ಲಕ್ಷ ಚ.ಕಿ.ಮೀ. ವ್ಯಾಪ್ತಿ ಹೊಂದಿರುವ, 4,200 ಚ.ಕಿ.ಮೀ. ಲಗೂನ್ ಅಂದರೆ ಕಡಲ ಕೆರೆ ಹೊಂದಿರುವ ಲಕ್ಷದ್ವೀಪದ ನಿಜ ನೆಲ 33 ಚ.ಕಿ.ಮೀ.ಗೂ ಕಡಿಮೆ.

ಹಿಂದಿನ ಯೋಜನಾ ಆಯೋಗವನ್ನು ನೀತಿ ಆಯೋಗ ಮಾಡಿದ ಮೋದಿ ಸರಕಾರದ ಒಂದೇ ನೀತಿ ಕಾರ್ಪೊರೇಟ್ ಬೆಳೆಸುವುದು. ನೀತಿ ಆಯೋಗದ ಅಮಿತಾಬ್ ಕಾಂತ್ ಪ್ರಧಾನಿ ಮೋದಿಯವರ ಮನದಂತೆ 2019ರಲ್ಲಿ ಲಕ್ಷದ್ವೀಪವನ್ನು ಆಧುನಿಕ ಅಭಿವೃದ್ಧಿಗೆ ಒಳಪಡಿಸುವ ಯೋಜನೆ ಮಾಡಿದರು. ಅದರಂತೆ ಮತ್ತೊಬ್ಬ ಗುಜರಾತಿ ಪ್ರಫುಲ್ ಖೋಡಾ ಪಟೇಲರನ್ನು ಇಲ್ಲಿನ ಆಡಳಿತಾಧಿಕಾರಿ ಮಾಡಲಾಯಿತು. ಈ ಪಟೇಲ ಐದು ತಿಂಗಳಲ್ಲಿ 15 ದಿನ ಬಂದು ಇಲ್ಲದ ಕಿತಾಪತಿ ಮಾಡಿದ ಆಡಳಿತಾಧಿಕಾರಿ.

ಲಕ್ಷದ್ವೀಪದ ಬಗೆಗೆ ಏನೇನೂ ತಿಳಿದುಕೊಳ್ಳುವ ಪ್ರಯತ್ನ ಮಾಡದೆ, ಐದು ತಿಂಗಳಲ್ಲಿ 15 ದಿನ ಮಾತ್ರ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಇಲ್ಲಿಗೆ ಕಿತಾಪತಿ ಮಾಡಲು ಮಾತ್ರ ಬಂದಿದ್ದರು ಎಂದು ಲಕ್ಷದ್ವೀಪದ ಸಂಸದ ಮಹಮ್ಮದ್ ಫೈಝಲ್ ಆರೋಪಿಸಿದ್ದಾರೆ. ಇಂಥ ವ್ಯಕ್ತಿಯ ಶಿಫಾರಸಿನ ಮೇಲೆ ಕೇಂದ್ರ ಸರಕಾರವು ಲಕ್ಷದ್ವೀಪದ ಬಗೆಗೆ ಹೊಸ ಕಾನೂನು ತರಲು ಹೊರಟಿರುವುದು ಅವಾಸ್ತವ ಎಂದೂ ಎನ್‌ ಸಿಪಿ ಪಕ್ಷದ ನಾಯಕರೂ ಆಗಿರುವ ಸಂಸದ ಫೈಝಲ್ ಹೇಳಿದ್ದಾರೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಕೇಂದ್ರವನ್ನು ಕೇಳಿಕೊಂಡಿರುವ ಅವರು ದ್ವೀಪದಲ್ಲಿ ಇದ್ದು ಕೆಲಸ ಮಾಡುವ ಆಡಳಿತಾಧಿಕಾರಿ ಕೊಡಿ ಎಂದಿದ್ದಾರೆ.

ಈ ಖೋಡಾ ಪಟೇಲ್ 2021ರಲ್ಲಿ ಲಕ್ಷದ್ವೀಪ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಿದರು. ಅಂತಿಮ ಉದ್ದೇಶ ಪ್ರವಾಸೋದ್ಯಮದ ಹೆಸರಿನಲ್ಲಿ ದ್ವೀಪಗಳನ್ನು ಉದ್ಯಮಿಗಳಿಗೆ ಅಡವಿಡುವುದು. 32 ಚಕಿಮೀ ವಿಸ್ತೀರ್ಣದ ಸುಮಾರು 12 ದ್ವೀಪಗಳು, ಪುಟ್ಟ ಸೇರಿ 35 ದ್ವೀಪಗಳು, 10ರಲ್ಲಿ ಜನವಸತಿ ಇದು ಲಕ್ಷದ್ವೀಪ. ಇಲ್ಲಿನ ವಿಶಿಷ್ಟ ಮೂಲನಿವಾಸಿಗಳು ಮಲಯಾಳಂನ ಇನ್ನೊಂದು ಬಗೆಯನ್ನು ಮಾತನಾಡುವ ಮಾಹಿಗಳು. 64,429 ಜನರಲ್ಲಿ ಶೇಕಡಾ 95ರಷ್ಟು ಸುನ್ನಿ ಶಾಫಿ ಜನರು. ಇತರರು ಶೇ.5ರಷ್ಟು ಮಾತ್ರ. ಜನರಲ್ಲಿ ಶೇ. 83ರಷ್ಟು ಮಲಯಾಳಿಗರು. ಉಳಿದ ಶೇ.17ರಷ್ಟು ಮಂದಿ ಮಾಹಿಗಳು.

ಮಲಯಾಳಂ, ಇಂಗ್ಲಿಷ್ ಅಧಿಕೃತ ಭಾಷೆಯ ಇಲ್ಲಿ ಜೇಸರಿ, ದಿವೇಹಿ ಮಾತನಾಡುವ ಸಣ್ಣ ಗುಂಪುಗಳು ಇವೆ. ಮೀನುಗಾರಿಕೆ, ತೆಂಗಿನನಾರು ಕೈಗಾರಿಕೆಯು ಜನರ ವೃತ್ತಿ, ಪ್ರವಾಸೋದ್ಯಮ ವೃದ್ಧಿಸುತ್ತಿರುವ ವೃತ್ತಿ ಹಾಗೂ ಉದ್ಯಮವಾಗಿದೆ

ಚೇರ, ಪಲ್ಲವ, ಚೋಳ, ಪೋರ್ಚುಗೀಸ್, ಕಣ್ಣೂರು ಅರಕ್ಕಲ್, ಟಿಪ್ಪು, ಬ್ರಿಟಿಷ್, ಮದರಾಸು ಪ್ರಾಂತ್ಯ, ಕೆನರಾ ಜಿಲ್ಲೆ, ಕೇಂದ್ರಾಡಳಿತ ಪ್ರದೇಶ. ಚೇರರೆಂದ ಮೇಲೆ ಕಡಲ ಕದಂಬರೂ ಇಲ್ಲಿ ಇದ್ದಿರಲವಕಾಶವಿದೆ. ಚೇರ ಮತ್ತು ಕಡಲ್ಗಳ್ಳರಾಗಿದ್ದ ಕಡಲ ಕದಂಬರ ಕದನವು ಸದಾ ಸಮುದ್ರ ಮತ್ತು ನದಿಗಳಲ್ಲಿಯೇ ನಡೆದಿದೆ.

ಇವು ಹವಳ ದ್ವೀಪಗಳು ಮತ್ತು ಅಡಲುಗಳು. ಚಿಪ್ಪುಜೀವಿಗಳ ಹೊರ ಚಿಪ್ಪುಮತ್ತು ಅವುಗಳ ನೆರೆಯ ಕಡಲ ಸಸ್ಯ ಹಾಗೂ ಮೀನುಗಳ ಅವಶೇಷಗಳು ಲಕ್ಷಾಂತರ ವರುಷಗಳಲ್ಲಿ ರಾಶಿಯಾಗಿ ಬೆಳೆದು ಮಣ್ಣಿನೊಡನೆ ನಿಂತಾಗ ಅದು ಹವಳ ದ್ವೀಪ ಎನಿಸಿಕೊಳ್ಳುತ್ತವೆ. ಲಕ್ಷದ್ವೀಪಗಳು ಅಂಥ ಹವಳದ ದಿಬ್ಬಗಳು ಇಲ್ಲವೇ ಕೋರಲ್ ರೀಫ್ ಐಲ್ಯಾಂಡ್ಸ್. ಅವುಗಳಲ್ಲಿ ಅಟೋಲ್ ಇಲ್ಲವೇ ಅಡಲುಗಳು. ಇವು ಸಹ ಹವಳ ದ್ವೀಪಗಳಾಗಿದ್ದು ಸುತ್ತ ಸತ್ತ ಹವಳದ ಬಳೆಯನ್ನು ಈಗಲೂ ಹೊಂದಿರುತ್ತವೆ. ಆಂಡ್ರೋಟ್ ದೊಡ್ಡ ನಗರ, ಕವರತ್ತಿ ರಾಜಧಾನಿ ನಗರ. ಮಿನಿಕಾಯ್, ಅಮಿನದೀವಿಗಳಂಥ ಪೇಟೆಗಳು.

ಜನವಾಸದ 11 ದ್ವೀಪಗಳ ಹೊರತು ಉಳಿದವೆಲ್ಲ ಸಣ್ಣವು. ಜನರಿಲ್ಲದ ಬಂಗಾರಂ ದ್ವೀಪಕ್ಕೆ ಪ್ರವಾಸಿಗರು ಹೋಗುವುದು ಇತ್ತೀಚಿಗೆ ಅಧಿಕವಾಗಿದೆ. ಇಲ್ಲಿನ ಬಂಗಾರದ ಮರಳ ಬೀಚ್‌ ಗಳು ಮುಂದೆ ಏನಾದಾವು? ಹಲವು ಬೀಚ್‌ ಗಳು ಇಲ್ಲಿವೆ. ಜನರಿಲ್ಲದ ಕೆಲವು ದ್ವೀಪಗಳು ಹಕ್ಕಿಗಳ ಸಾಮ್ರಾಜ್ಯ ಎನಿಸಿವೆ. ಮುಂದೆ? ಏಕೆಂದರೆ ಖೋಡಾ ಪಟೇಲ್ ಮೂಲಕ ಅಂಬಾನಿ, ಅದಾನಿಯಂಥವರು ಬಂಗಾರಂ ಸಹಿತ ಇಂಥ ದ್ವೀಪಗಳ ಕಣ್ಣು ಹಾಕಿದ್ದಾರೆ.

ಇಲ್ಲಿ ಕಡಲಿನಲ್ಲಿ ನಡೆಯಬಹುದಾದ ಸ್ಥಳಗಳು ಹಲವು. ಏಕೆಂದರೆ ದ್ವೀಪಗಳ ಸುತ್ತ ಸಮುದ್ರ ಆಳವಿಲ್ಲದಿರುವುದು ಉದ್ದಕ್ಕೂ ಹಲವು ಕಡೆ ನೋಡಬಹುದು. ಲಗೂನ್ ಎಂಬ ಸುಂದರ ಕಡಲಕೆರೆಗಳು ಕೆಲವು, ಒಟ್ಟಾರೆ ನಾಕ ದ್ವೀಪವಿದು. ಈಗಿನ ಆಡಳಿತಾಧಿಕಾರಿ ಇದನ್ನು ನರಕ ಮಾಡಬಹುದು ಎಂಬ ಆತಂಕ ಜನರದ್ದು. ಆದ್ದರಿಂದ ಪ್ರತಿಭಟನೆ ನಡೆದಿದೆ.

ಲಕ್ಷದ್ವೀಪ ಜನರನ್ನು ಬೆಂಬಲಿಸಿ ಕೇರಳ ವಿಧಾನ ಸಭೆಯು ಮೇ 31ರಂದು ನಿರ್ಣಯ ಅಂಗೀಕರಿಸಿದೆ. ಆಡಳಿತಾಧಿಕಾರಿ ವಿರುದ್ಧ ಲಕ್ಷದ್ವೀಪದ ಜನರು ನಡೆಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇರಳ ವಿಧಾನ ಸಭೆಯು ಈ ತೀರ್ಮಾನ ತೆಗೆದುಕೊಂಡಿತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಧಾನ ಸಭೆಯಲ್ಲಿ ಈ ಸಂಬಂಧ ನಿರ್ಣಯ ಮಂಡಿಸಿದಾಗ ಅದನ್ನು ಎಲ್ಲ ಪಕ್ಷಗಳವರು ಬೆಂಬಲಿಸಿದರು. ಹಿಂದಿನ ಬಾಗಿಲಿನಿಂದ ಕೇಸರಿ ಅಜೆಂಡಾ ತರಲು ಬಿಜೆಪಿ ಲಕ್ಷದ್ವೀಪದಲ್ಲಿ ಹುನ್ನಾರ ನಡೆಸಿದೆ. ತೆಂಗಿನ ಮರಗಳಿಗೆ ಕೇಸರಿ ಬಣ್ಣ ಬಳಿದು ಪ್ರಕತಿ ಕೆಡಿಸಲಾಗಿದೆ. ದ್ವೀಪಗಳನ್ನು ಕಾರ್ಪೊರೇಟ್‌ ಗಳಿಗೆ ಅಡವು ಇಡುವ ನಡೆಯನ್ನು ಖಂಡಿಸುವುದಾಗಿ ತೀರ್ಮಾನದಲ್ಲಿ ಹೇಳಲಾಗಿದೆ.

 ಗಾಂಧೀಜಿ ಎಂಬ ಆಸ್ತಿ ಕಳೆದುಕೊಂಡ, ಮಕ್ಕಳಿಗೆ ಏನೂ ಮಾಡಿ ಇಡದ ವ್ಯಕ್ತಿಯ ರಾಜ್ಯ ಗುಜರಾತ್. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಈಗ ಗುಜರಾತ್ ಜನರದ್ದು ದಾಖಲೆ, ಹಾಗೆಯೇ ಬ್ಯಾಂಕಿಗೆ ವಂಚಿಸಿದವರ ಪಟ್ಟಿಯಲ್ಲಿ ಅವರೇ ಮುಂದೆ, ಬ್ಯಾಂಕುಗಳಿಗೆ ಟೋಪಿ ಹಾಕಿ ಪರಾರಿ ಆದವರಲ್ಲಿ ಬಂಟ್ವಾಳದ ವಿಜಯ ಮಲ್ಯ ಬಿಟ್ಟರೆ ಉಳಿದವರೆಲ್ಲ ಗುಜರಾತಿಗಳೇ.

ಸ್ಮಾರ್ಟ್ ಸಿಟಿ ಎನ್ನುತ್ತ ಈಗ ಲಕ್ಷ ದ್ವೀಪದಲ್ಲಿ ಬುದ್ಧಿವಂತ ನಗರ ಕಟ್ಟಲು ಹೊರಟಿರುವ ಪ್ರಫುಲ್ ಖೋಡಾ ಪಟೇಲ್ ಮೊದಲು ದಮನ್ ದಿಯುಗಳನ್ನು ಲಗಾಡಿ ತೆಗೆದ ಗುಜರಾತಿ.

ಏಳು ಬಾರಿ ದಾದ್ರಾ ನಗರ್ ಹವೇಲಿಯ ಸಂಸದರಾಗಿದ್ದ ಮೋಹನ್ ದೇಲ್ಕರ್ ಮುಂಬಯಿಯ ಹೋಟೆಲೊಂದರಲ್ಲಿ 2021ರ ಫೆಬ್ರವರಿ 21ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ 15 ಪುಟಗಳ ಮರಣ ಪತ್ರವು ಸಂಸದರು ಕೆಲಸ ಮಾಡದ ಸ್ಥಿತಿ ತಂದ ಪಿ.ಕೆ.ಪಟೇಲ ಕೊಟ್ಟ ಮಾನಸಿಕ ಹಿಂಸೆ ವಿವರಿಸಿತ್ತು. ಆದರೆ ದೇಲ್ಕರ್ ಮಗ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ಖದೀಮರ ಕೈ ಭಯಂಕರವಿದೆ.

ಪ್ರಫುಲ್ ಪಟೇಲ್ 2007ರಲ್ಲಿ ಮೊದಲಿಗೆ ಗುಜರಾತಿನಲ್ಲಿ ಬಿಜೆಪಿ ಶಾಸಕರಾದರು. ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಕೇಸಿನಲ್ಲಿ ಅಮಿತ್ ಶಾ ಜೈಲಿಗೆ ಹೋದಾಗ 2010ರಲ್ಲಿ ಗುಜರಾತಿನ ಗೃಹ ಮಂತ್ರಿ ಆದರು ಈ ಪಟೇಲ್. 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ದಾದ್ರಾ ನಗರ್ ಹವೇಲಿ, ದಮನ್ ದಿಯುಗಳಿಗೆ ಆಡಳಿತಾಧಿಕಾರಿ ಆದರು. ಅಲ್ಲಿ ಕಾರ್ಪೊರೇಟ್ ಬೆಳೆ ತೆಗೆದರು.

ಅಲ್ಲಿನ ಉತ್ತಮ ಜಾಗಗಳನ್ನೆಲ್ಲ ಸೆಝ್, ಪ್ರವಾಸೋದ್ಯಮ, ಸ್ಮಾರ್ಟ್ ಸಿಟಿ ಹೆಸರುಗಳಲ್ಲಿ ಗುಜರಾತಿಗಳಿಗೆ ಒತ್ತೆ ಇಟ್ಟ ಮೇಲೆ ಪಟೇಲ್ ಕೆಲಸ ಇನ್ನು ಲಕ್ಷದ್ವೀಪದಲ್ಲಿ ಎಂದು ಪ್ರಧಾನಿ ಮೋದಿಯವರು ತೀರ್ಮಾನಿಸಿದರು. ಆದ್ದರಿಂದ ಈ ಸರಕಾರದಲ್ಲಿ ಲಕ್ಷದ್ವೀಪ ಆಳುವವರ ಅತ್ಯಾಚಾರಕ್ಕೆ ಸಿಗುವುದನ್ನು ತಪ್ಪಿಸುವುದು ಸಾಧ್ಯವೆ ಎನ್ನುವುದು ಈಗ ಎಲ್ಲರ ಮುಂದೆ ಇರುವ ಪ್ರಶ್ನೆಯಾಗಿದೆ.

ಭೂಬಿಸಿಗೆ ಬಳಲಿದ ಜಗತ್ತಿನಲ್ಲಿ ಕಡಲ ಮಟ್ಟ ಏರಿಕೆ ಆಗುತ್ತಲಿದೆ. ಅದು ಕಬಳಿಸುವ ಭಯಕ್ಕಿಂತ ಲಕ್ಷದ್ವೀಪಕ್ಕೆ ಈಗ ಕೇಂದ್ರ ಸರಕಾರ ಮತ್ತು ಆಡಳಿತಾಧಿಕಾರಿ ಹೇಗೆ ಕಬಳಿಸಬಹುದು ಎಂಬ ಚಿಂತೆಯೇ ದೊಡ್ಡದಾಗಿದೆ.

ಮಂಗಳೂರು ಸಂಬಂಧ

ಟಿಪ್ಪುಸುಲ್ತಾನರನ್ನು ಸೋಲಿಸಿ ಬ್ರಿಟಿಷರು ಲಕ್ಷದ್ವೀಪ ವಶಕ್ಕೆ ಪಡೆದರು. ಸ್ವಲ್ಪ ಕಾಲ ಕಣ್ಣೂರಿನ ಅರಕ್ಕಲ್ ಅರಸರಿಗೇ ನೀಡಿದರು. ಆದರೆ ಹಿಂಪಡೆದು ಕೆನರಾ ಜಿಲ್ಲೆಗೆ ಸೇರಿಸಿದರು. ಆದ್ದರಿಂದ ಅಲ್ಲಿಂದ ಬಂದು ಇಲ್ಲಿ ತುಂಬ ಜನ ಓದುತ್ತಾರೆ. ಹಿಂದಿನ ಸಂಸದ ಪಿ. ಎಂ. ಸಯೀದ್ ಚೆನ್ನಾಗಿ ತುಳು ಮಾತನಾಡುತ್ತಿದ್ದರು. ಕೇರಳದ ಕಣ್ಣೂರು, ಕೊಚ್ಚಿಗಳಿಗೆ 500 ಕಿ.ಮೀ.ಯಿಂದ 1,200 ಕಿ.ಮೀ. ದೂರದವರೆಗೆ ಹರಡಿರುವ ಈ ದ್ವೀಪದ ಜನರು ಮ್ಯಾಕರೆಲ್‌ ಗೆ ಐಲ ಎನ್ನದೆ ಬಂಗುಡೆ ಎನ್ನುತ್ತಾರೆ.

1956ರ ನವೆಂಬರ್ 1ರಂದು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಆಯಿತು. ಒಂದು ಜಿಲ್ಲೆ, ಹತ್ತು ವಿಭಾಗ ಇಲ್ಲವೇ ತಾಲೂಕುಗಳನ್ನು ಇದು ಹೊಂದಿದೆ. ಕೇರಳ ಹೈಕೋರ್ಟ್ ವ್ಯಾಪ್ತಿಯಲ್ಲಿ ಇದು ಬರುತ್ತದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!