►ಕೊರಗಜ್ಜ ವೇಷಧಾರಿಯ ಮನೆ, ಅಂಗಡಿ, ಕಾರಿಗೆ ಬೆಂಕಿ ಹಾಕುವಂತೆ ಪ್ರಚೋದನೆ !
ಮಂಗಳೂರು: ವಿಟ್ಲದಲ್ಲಿ ಮದುವೆಯ ಮರುದಿನ ನಡೆದ ಕಾರ್ಯಕ್ರಮದಲ್ಲಿ ವರನೊಬ್ಬ ಕೊರಗಜ್ಜನ ರೂಪ ಹೋಲುವ ವೇಷ ಧರಿಸಿದ ಪ್ರಕರಣವನ್ನು ಮುಂದಿಟ್ಟು ದುಷ್ಕರ್ಮಿಯೋರ್ವ, ಮಂಗಳೂರಿನಲ್ಲಿಯೂ ಗೋಧ್ರಾ ಮಾದರಿಯಲ್ಲಿ ಗಲಭೆಯ ನಡೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ವಿಟ್ಲದಲ್ಲಿ ಮದುವೆ ಮರುದಿನದ ಕಾರ್ಯಕ್ರಮದಲ್ಲಿ ವರನೊಬ್ಬ ಕೊರಗಜ್ಜನ ರೂಪವನ್ನು ಹೋಲುವ ವೇಷ ಧರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಸಂಘಪರಿವಾರದ ಕಾರ್ಯಕರ್ತರು ಈ ಘಟನೆಯನ್ನು ಮುಂದಿಟ್ಟು ಅದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸುವ ಪ್ರಯತ್ನ ನಡೆಸಿ, ಪ್ರದೇಶದಲ್ಲಿ ಶಾಂತಿ ಕದಡುವ ಕೆಲಸಕ್ಕೂ ಕೈಹಾಕಿದ್ದರು.
ಇದೀಗ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬ ದುಷ್ಕರ್ಮಿಯೊಬ್ಬ ವಿಟ್ಲ ಘಟನೆಯನ್ನು ಉಲ್ಲೇಖಿಸುತ್ತಾ, ಗೋಧ್ರಾ ಷಡ್ಯಂತ್ರದ ನಂತರ ನಡೆದ ಗುಜರಾತ್ ಗಲಭೆ ಮಂಗಳೂರಲ್ಲೂ ನಡೆಸಬೇಕು. ಆಗಷ್ಟೇ ಮುಸ್ಲಿಮರು ಸುಮ್ಮನಾಗುತ್ತಾರೆ. ಗುಜರಾತ್ ಗಲಭೆ ಯಾವಾಗ, ಹೇಗೆ ನಡೆಯಿತೆಂದು ಮುಸ್ಲಿಮರು ಯೋಚಿಸುವುದು ಒಳಿತು ಎಂದು ಬರೆದುಕೊಂಡಿದ್ದಾನೆ.
ಈ ವಿಷ್ಣುಪ್ರಸಾದ್ ಫೆಡರಲ್ ಬ್ಯಾಂಕಿನಲ್ಲಿ ವ್ಯಾವಹಾರಿಕ ಮುಖ್ಯಸ್ಥ ಎಂದು ತನ್ನನ್ನು ವೈಯಕ್ತಿಕವಾಗಿ ಗುರುತಿಸಿಕೊಂಡಿದ್ದಾನೆ.
ಆತ ಇಷ್ಟಕ್ಕೇ ಸುಮ್ಮನಾಗದೆ ಮತ್ತೊಂದು ಪೋಸ್ಟ್ ನಲ್ಲಿ, ವಿಟ್ಲ ಘಟನೆಯಲ್ಲಿ ಪ್ರಮುಖ ಸೂತ್ರಧಾರನನ್ನು ಇನ್ನೂ ಜೀವಂತವಾಗಿ ಬಿಟ್ಟಿದ್ದೇ ತಪ್ಪಾಯಿತು ಎಂಬರ್ಥದಲ್ಲಿ ಬರೆದಿದ್ದಾನೆ. ವಿಟ್ಲ ಘಟನೆಯನ್ನು ಮುಸ್ಲಿಮರು ಖಂಡಿಸಿದ್ದಾರಂತೆ. ಅದಕ್ಕಾಗಿ ಹಿಂದೂಗಳು ಸುಮ್ಮನಿರಬೇಕಂತೆ. ಹಾಗಾದರೆ 15 ಜನ ಹಿಂದೂಗಳು ಡಿಜೆ ಹಳ್ಳಿ, ಕೆಜಿ ಹಳ್ಳಿ ರೀತಿಯ ಗಲಭೆ ನಡೆಸಿ ಆಮೇಲೆ ಖಂಡಿಸಿ ಸುಮ್ಮನಾಗೋಣ ಎಂದು ವಿಷ್ಣುಪ್ರಸಾದ್ ಬರೆದುಕೊಂಡಿದ್ದಾನೆ.
ಮದುಮಗನ ಮನೆ, ಅಂಗಡಿ ಮತ್ತು ಕಾರನ್ನು ಡಿಜೆ ಹಳ್ಳಿ, ಕೆಜಿ ಹಳ್ಳಿ ರೀತಿಯಲ್ಲೇ ಬೆಂಕಿ ಹಚ್ಚಿ ನಾಶಪಡಿಸದೆ ಬಿಟ್ಟದ್ದು ಕೂಡಾ ತಪ್ಪು ಎಂದು ವಿಷ್ಣುಪ್ರಸಾದ್ ಬರೆದುಕೊಂಡಿದ್ದಾನೆ.
ಈತನ ಫೇಸ್ ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಗಲಭೆ ನಡೆಸಿ ಮುಸ್ಲಿಮರ ನರಮೇಧಕ್ಕೆ ಕರೆಕೊಟ್ಟ ದುಷ್ಕರ್ಮಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.