ಬಿಜೆಪಿ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ: ಸಲೀಂ ಅಹ್ಮದ್

Prasthutha|

ಬೆಂಗಳೂರು : ಬಿಜೆಪಿ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಜನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡು ಕಳೆದ ಒಂದು ವಾರದಿಂದ ಸ್ಥಳೀಯವಾಗಿ ಸಭೆ, ಸಂಘಟನೆ ಮಾಡುತ್ತಿದ್ದೇನೆ. ಆಂತರಿಕ ಸಭೆಯಲ್ಲಿ ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ. ನಾಳೆ ಮತ್ತು ನಾಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಾಗೂ 18ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹಾನಗಲ್ ಗೆ ಬರುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು 19ರಂದು ಸಿಂದಗಿಯಲ್ಲಿ ಹಾಗೂ 20ರಂದು ಹಾನಗಲ್ ಗೆ ಆಗಮಿಸಿ ಭಾಷಣ ಮಾಡಲಿದ್ದಾರೆ. ಹೀಗೆ 27ರವರೆಗೂ ನಿರಂತರವಾಗಿ ಚುನಾವಣಾ ಪ್ರಚಾರ ನಡೆಯಲಿದೆ ಎಂದು ತಿಳಿಸಿದರು.


ನಾವು ಬಿಜೆಪಿಗೆ ಯಾಕೆ ಮತ ಹಾಕಬೇಕು ಎಂದು ಬಿಜೆಪಿ ನಾಯಕ ಹಾಗೂ ಕಾರ್ಯಕರ್ತರಿಗೆ ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ. 55 ರೂ. ಇದ್ದ ಪೆಟ್ರೋಲ್ 108 ರೂ. ಮಾಡಿದ್ದಕ್ಕೆ, 50 ರೂ. ಇದ್ದ ಡೀಸೆಲ್ 100 ರೂ. ಆಗಿದೆ ಇದಕ್ಕೆ ನಿಮಗೆ ಮತ ಹಾಕಬೇಕಾ? ಕಪ್ಪುಹಣ ತಂದು ಪ್ರತಿಯೊಂದು ಖಾತೆಗೂ 15 ಲಕ್ಷ ಹಾಕುತ್ತೇವೆ ಎಂದು ಸುಳ್ಳು ಹೇಳಿದ್ದಕ್ಕಾ? ರಾಜ್ಯಕ್ಕೆ ಬರಬೇಕಾಗಿದ್ದ ಹಣ ತರದಿರುವುದಕ್ಕಾ? ಯಾವುದಕ್ಕೆ ಮತ ಹಾಕಬೇಕು? ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದಿದ್ದರು. ಅವರು ಸ್ವರ್ಗ ತೋರಲಿಲ್ಲ, ನರಕ ತೋರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರ್ಕಾರ 37 ಸಾವಿರ ಎಂದು ಸುಳ್ಳು ಹೇಳಿದೆ. ಹೀಗಾಗಿ ಮತ ಕೇಳಲು ಬಿಜೆಪಿ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಸಲಿಂ ಅಹ್ಮದ್ ಹೇಳಿದರು.

- Advertisement -


ನಾಲ್ವರು ಸಚಿವರು ಕಳೆದ ತಿಂಗಳು ಜನಾಶೀರ್ವಾದ ಯಾತ್ರೆ ಮಾಡಿದ್ದರು. ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಕ್ಷಮೆ ಕೋರುವ ಯಾತ್ರೆ ಮಾಡಬೇಕಿತ್ತು. ಜನ ಇಂದು ಬಿಜೆಪಿ ವಿರುದ್ಧ ಆಕ್ರೋಶ ಯಾತ್ರೆ ಮಾಡಲಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ಸರ್ಕಾರದ ವೈಫಲ್ಯಗಳಿಂದಾಗಿ ಜನ ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಶಾಸಕರುಗಳೇ ತಮ್ಮದು 30% ಸರ್ಕಾರ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಉತ್ತರ ನೀಡಬೇಕು. ಬಿಜೆಪಿ ಭ್ರಷ್ಟಾಚಾರ ಇಂದು ಎಲ್ಲರ ಮನೆ ಮಾತಾಗಿದೆ. ಯಡಿಯೂರಪ್ಪ ಅವರು ಕಣ್ಣೀರು ಹಾಕಿದ್ದು ಯಾಕೆ? ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದಕ್ಕೆ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಿದರೋ? ಅಥವಾ ಹಿರಿಯರನ್ನು ಕಸದ ಬುಟ್ಟಿಗೆ ಎಸೆಯುವ ಸಂಸ್ಕೃತಿಯನ್ನು ಮುಂದುವರಿಸಿದ್ದಾರೋ? ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ಸಲೀಂ ಆಗ್ರಹಿಸಿದರು.



Join Whatsapp