ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದೆ. ಈ ನಡುವೆ ಭಾರೀ ಗಾಳಿ- ಮಳೆಗೆ ಗಾಲೆ ಮೈದಾನದ ಒಂದು ಭಾಗದ ಛಾವಣಿ ಸಂಪೂರ್ಣವಾಗಿ ಧರಾಶಾಹಿಯಾಗಿದೆ.
ಎರಡನೇ ದಿನದಾಟ ಆರಂಭವಾಗುವುದಕ್ಕೆ ಕೆಲ ಹೊತ್ತಿನ ಮೊದಲು ಘಟನೆ ನಡೆದಿದೆ. ಈ ವೇಳೆ ಮೈದಾನದಲ್ಲಿ ಪ್ರೇಕ್ಷಕರು ಯಾರೂ ಇರಲಿಲ್ಲ. ಹೀಗಾಗಿ ದೊಡ್ಡ ದುರಂತವೊಂದು ತಪ್ಪಿದೆ. ವರುಷಗಳ ಹಿಂದೆ ಸುನಾಮಿ ಅಪ್ಪಳಿಸಿ ಈ ಮೈದಾನ ಭಾಗಶಃ ನಾಶವಾಗಿತ್ತು. ಛಾವಣಿ ಕುಸಿತ ಮತ್ತು ಮಳೆಯಿಂದಾಗಿ ಎರಡನೇ ದಿನದಾಟವನ್ನು ತಡವಾಗಿ ಪ್ರಾರಂಭಿಸಲಾಯಿತು.
ಬುಧವಾರದ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸಿದ್ದ ಆಸ್ಟ್ರೇಲಿಯಾ 114 ರನ್‌ಗಳ ಹಿನ್ನಡೆಯಲ್ಲಿತ್ತು. ಆದರೆ ಆರಂಭಿಕ ಉಸ್ಮಾನ್ ಖ್ವಾಜಾ (71 ರನ್), ಕ್ಯಾಮರೂನ್ ಗ್ರೀನ್ (77 ರನ್) ಹಾಗೂ ಕೀಪರ್ ಅಲೆಕ್ಸ್ ಕೇರಿ ಗಳಿಸಿದ 45 ರನ್‌ಗಳ ನೆರವಿನಿಂದ 8 ವಿಕೆಟ್ ನಷ್ಟದಲ್ಲಿ 313 ರನ್‌ಗಳಿಸಿದೆ. 69 ಓವರ್‌ಗಳ ಬಳಿಕ ಒಟ್ಟು 101 ರನ್‌ಗಳ ಮುನ್ನಡೆ ಸಾಧಿಸಿದೆ.
ನಾಥನ್ ಲಿಯೋನ್ ವಿಶ್ವದಾಖಲೆ
ಅತಿಥೇಯ ಲಂಕಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 212 ರನ್‌ಗಳಿಗೆ ನಿಯಂತ್ರಿಸುವಲ್ಲಿ ಆಸೀಸ್ ಸ್ಪಿನ್ನರ್ ನಾಥನ್ ಲಿಯೋನ್ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ 25 ಓವರ್‌ಗಳ ದಾಳಿಯಲ್ಲಿ 90 ರನ್ ನೀಡಿದ್ದ ಲಿಯೋನ್, ಐದು ವಿಕೆಟ್ ಉರುಳಿಸಿದ್ದರು. ಆ ಮೂಲಕ ವೃತ್ತಿ ಜೀವನದಲ್ಲಿ 20ನೇ ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಏಷ್ಯಾ ದೇಶಗಳ ಮೈದಾನಗಳಲ್ಲಿ ನಾಥನ್ ಐದು ವಿಕೆಟ್‌ಗಳ ಸಾಧನೆ ಮಾಡುತ್ತಿರುವುದು ಇದು 9ನೇ ಬಾರಿಯಾಗಿದೆ. ಆ ಮೂಲಕ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ತೊಂದೆಡೆ ಟೆಸ್ಟ್ ಕ್ರಿಕೆಟ್‌ನಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಪಡೆದ ಆಸ್ಟ್ರೇಲಿಯಾದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶೇನ್ ವಾರ್ನ್ (37), ಗ್ಲೆನ್ ಮೆಕ್‌ಗ್ರಾತ್ (29), ಡೆನ್ನಿಸ್ ಲಿಲ್ಲಿ (23) ಮತ್ತು ಕ್ಲಾರಿ ಗ್ರಿಮ್ಮೆಟ್ (21) ನಾಥನ್ ಲಿಯೋನ್‌ಗಿಂತ ಮುಂದಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಲಿಯೋನ್ 12ನೇ ಸ್ಥಾನದಲ್ಲಿದ್ದಾರೆ