ಮುಸ್ಲಿಮರ ದೇಶಭಕ್ತಿಯನ್ನು ಅನುಮಾನಿಸಬಾರದು: ಶಿವಪಾಲ್ ಯಾದವ್

Prasthutha|

ನವದೆಹಲಿ: ಭಾರತೀಯ ಮುಸ್ಲಿಮರು ಯಾವಾಗಲೂ ದೇಶಕ್ಕೆ ನಿಷ್ಠರಾಗಿರುತ್ತಾರೆ. ಈ ನಿಟ್ಟಿನಲ್ಲಿ ಅವರ ದೇಶಭಕ್ತಿಯ ಕುರಿತು ಅನುಮಾನ ವ್ಯಕ್ತಪಡಿಸಬಾರದು ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಹೇಳಿದ್ದಾರೆ.

- Advertisement -

ಸ್ವಾತ್ರಂತ್ರ್ಯ ಹೋರಾಟ ಅಥವಾ ಇನ್ನಿತರ ಸಂದರ್ಭದಲ್ಲಿ ಮುಸ್ಲಿಮರು ಯಾವಾಗಲೂ ದೇಶಭಕ್ತರಾಗಿದ್ದರು ಎಂದು ಯುಪಿಯ ಹರ್ಡೋಯ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.
ಮಾತ್ರವಲ್ಲ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಎಲ್ಲಾ ಜಾತ್ಯತೀತ ಪಕ್ಷಗಳು ಒಗ್ಗೂಡುವಂತೆ ಅವರು ಕರೆ ನೀಡಿದರು.

ಅಲಿಘಡ್ ನಗರದ ಹೆಸರನ್ನು ಹರಿಘರ್ ಎಂದು ಬದಲಿಸಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿಯ ಪ್ರಥಮ ಹೆಜ್ಜೆಯಲ್ಲ. ಬಿಜೆಪಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ಅದು ದೇಶದ ಅಥವಾ ಜನರ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ ಎಂದು ಅವರು ಆರೋಪಿಸಿದರು.

- Advertisement -

ಮಾತ್ರವಲ್ಲದೆ ಸರ್ಕಾರ ಎಲ್ಲಾ ರಂಗದಲ್ಲಿಯೂ ವಿಫಲವಾಗಿದೆ. ಇದರಿಂದ ನಮ್ಮ ದೇಶ ಹಿನ್ನಡೆಯನ್ನು ಕಂಡಿದೆಯೆಂದು ಅವರು ಬೊಟ್ಟು ಮಾಡಿದರು.

ಶಿವಪಾಲ್ ಯಾದವ್ ಅವರು ಮುಂಬರುವ ಯುಪಿ ಚುನಾವಣೆಯ ಸಿದ್ಧತೆಯಲ್ಲಿದ್ದಾರೆ. ಮಾತ್ರವಲ್ಲದೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಯ ಯೋಚನೆಯಲ್ಲಿದ್ದಾರೆ.

ಯುಪಿಯಲ್ಲಿ 2022 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ರಂಗ ಕಾವೇರಿದ್ದು, ಸಣ್ಣ ಪಕ್ಷಗಳ ಜೊತೆ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜುಗೊಳ್ಳುತ್ತಿದೆ. ಪ್ರಾದೇಶಿಕ ಪಕ್ಷಗಳಾದ ಆಝಾದ್ ಸಮಾಜ ಪಕ್ಷ, ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸ್ ಇ ಇತ್ತೇಹಾದುಲ್ ಮುಸ್ಲಿಮೀನ್, ಸುಹೆಲ್ದೇವ್ ಭಾರತ್ ಸಮಾಜ್ ಪಕ್ಷಗಳ ಜೊತೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿ.ಪಿ.ಐ.ಎಮ್ ಪಕ್ಷಗಳ ಅಖಾಡ ರೆಡಿಯಾಗಿದೆ.

Join Whatsapp