ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಹಿರಿಯ ಕಾರ್ಯಕರ್ತ ಎಂ ಎಚ್ ಶಾಹುಲ್ ಹಮೀದ್ ಇಂದು ಮಧ್ಯಾಹ್ನ ಬೋಳಂಗಡಿಯಲ್ಲಿರುವ ತಮ್ಮ ಸ್ವ ಗೃಹದಲ್ಲಿ ನಿಧನರಾದರು.
ಅವರಿಗೆ 90 ವಯಸ್ಸಾಗಿತ್ತು. ಮೂಲತಃ ಬಂಟ್ವಾಳ ತಾಲೂಕಿನ ಮೂಲರಪಟ್ನದ ನಿವಾಸಿಯಾಗಿದ್ದ ಇವರು, ಹಲವು ವರ್ಷಗಳ ಹಿಂದೆ ಬೋಳಂಗಡಿಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಆರಂಭಿಸಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಸ್ಥಾಪಕ ಸದಸ್ಯ ಹಾಗೂ ತಮ್ಮ ಮಾವ(ಪತ್ನಿಯ ತಂದೆ) ಮರ್ಹೂಮ್ ಚೆಂಡಾಡಿ ಮುಹಮ್ಮದ್ ಅವರ ಪ್ರಭಾವಕ್ಕೊಳಗಾಗಿ, ಸಂಘಟನಾತ್ಮಕ ಕೆಲಸಗಳಲ್ಲೂ ಕೂಡ ಗುರುತಿಸಿಕೊಂಡಿದ್ದರು.
ಬೋಳಂಗಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಅಭಿವೃದ್ಧಿಗಾಗಿ ಕೂಡ ತಮ್ಮಿಂದಾದ ಪ್ರಯತ್ನ ಮಾಡಿದ್ದರು.
ಸ್ಥಳೀಯವಾಗಿ ಎಲ್ಲ ಧರ್ಮೀಯರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರಿಂದ ‘ಸಾವುಂಞಾಕ’ ಎಂದೇ ಸ್ಥಳೀಯರಲ್ಲಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಫಾತಿಮಾ ಚೆಂಡಾಡಿ, ಪುತ್ರರಾದ ಅಬ್ದುಶ್ಶೂಕೂರ್, ಎಂ ಎಚ್ ಮುಸ್ತಫಾ, ಆರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬೋಳಂಗಡಿಯ ಹವ್ವಾ ಜುಮಾ ಮಸೀದಿಯಲ್ಲಿ ರಾತ್ರಿ 9.30ಕ್ಕೆ ತದ್‌ಫೀನ್ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ .