ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಸಹಿ: ಜಿಪಂ, ತಾಪಂ ಚುನಾವಣೆ ಮುಂದೂಡಿಕೆ ಖಚಿತ

Prasthutha|

ಬೆಂಗಳೂರು: ವಿಧಾನಮಂಡಲದಲ್ಲಿ ನಿನ್ನೆ ಅಂಗೀಕಾರವಾದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಇಂದು ಅಂಕಿತ ಹಾಕಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಹಿಯ ನಂತರ ಮಸೂದೆ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಇದರಿಂದಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಮುಂದೂಡಿಕೆಯಾಗುವುದು ಬಹುತೇಕ ಖಚಿತವಾಗಿದೆ. ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣವಾಗುವ ತನಕ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಹೀಗಾಗಿ ಸದ್ಯಕ್ಕೆ ಚುನಾವಣೆ ಮರೀಚಿಕೆಯಾಗಿದೆ.

- Advertisement -

ಈ ಮಸೂದೆ ಆಶಯದಂತೆ ಪಂಚಾಯತ್ ಗಳ ಕ್ಷೇತ್ರ ಪುನರ್ ವಿಂಗಡನೆಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗುತ್ತದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಕಾರ್ಯದರ್ಶಿ ಮಟ್ಟದ ಅಧಿಕಾರಿ ಮತ್ತು ಪಂಚಾಯತ್ ತಜ್ಞರೊಬ್ಬರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗುತ್ತಿದೆ.

ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರನ್ನು ಪದನಿಮಿತ್ತ ಸದಸ್ಯ ಮತ್ತು ಪದನಿಮಿತ್ತ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತಿದೆ. ಈ ಸಮಿತಿ ಸಭೆ ಸೇರಿ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ಗಡಿಯನ್ನು ಪುನರ್ ವಿಂಗಡಣೆ ಮಾಡಲು ಕನಿಷ್ಠ ಏನಿಲ್ಲವೆಂದರೆ 8 ರಿಂದ 10 ತಿಂಗಳು ಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ತಕ್ಷಣಕ್ಕೆ ಚುನಾವಣೆ ಸಾಧ್ಯತೆಗಳು ಕ್ಷೀಣಿಸಿವೆ.

- Advertisement -