ಟಿ20 ವಿಶ್ವಕಪ್‌ ಫೈನಲ್‌ | ಚಾಂಪಿಯನ್‌ ಪಟ್ಟಕ್ಕಾಗಿ ಭಾನುವಾರ ಇಂಗ್ಲೆಂಡ್‌ -ಪಾಕಿಸ್ತಾನ ಮುಖಾಮುಖಿ

Prasthutha|

ಟಿ20 ವಿಶ್ವಕಪ್‌ ಟೂರ್ನಿಯ 8ನೇ ಆವೃತ್ತಿಯ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಚಾಂಪಿಯನ್‌ ಪಟ್ಟದ ಹೋರಾಟಕ್ಕಾಗಿ ಮೆಲ್ಬರ್ನ್‌ನಲ್ಲಿ ಭಾನುವಾರ ಮಧ್ಯಾಹ್ನ ಮುಖಾಮುಖಿಯಾಗಲಿವೆ.   

- Advertisement -

ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಹಾಲಿ ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌, ಚುಟುಕು ಮಾದರಿಯಲ್ಲೂ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ಹುಮ್ಮಸ್ಸಿನಲ್ಲಿದೆ. 2010ರಲ್ಲಿ ಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್‌,  7 ವಿಕೆಟ್‌ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಟೂರ್ನಿಯ ಚಾಂಪಿಯನ್‌ ಆಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿದೆ.

ಮತ್ತೊಂದೆಡೆ  ಪಾಕಿಸ್ತಾನ 3ನೇ ಬಾರಿಗೆ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಡಲಿದೆ. ಟೂರ್ನಿಯ ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ(2007), ಪಾಕಿಸ್ತಾನ, ಭಾರತಕ್ಕೆ 5 ರನ್‌ಗಳ ಅಂತರದಲ್ಲಿ ರೋಚಕವಾಗಿ ಶರಣಾಗಿತ್ತು. ಆದರೆ ಇಂಗ್ಲೆಂಡ್‌ನಲ್ಲಿ ನಡೆದ ಆ ನಂತರದ ಆವೃತ್ತಿಯಲ್ಲಿ (2009) ಫೈನಲ್‌ ಪ್ರವೇಶಿಸಿದ ಪಾಕ್‌, ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟಕ್ಕೇರಿತ್ತು. ಆ ಬಳಿಕ 2010 ಮತ್ತು 2012ರಲ್ಲಿ ಪಾಕಿಸ್ತಾನದ ಅಭಿಯಾನ ಸೆಮಿಫೈನಲ್‌ನಲ್ಲೇ ಅಂತ್ಯವಾಗಿತ್ತು.

- Advertisement -

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಆಡಿರುವ 28 ಪಂದ್ಯಗಳಲ್ಲಿ ಇಂಗ್ಲೆಂಡ್‌ 18 ಮತ್ತು ಪಾಕಿಸ್ತಾನ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿತ್ತು. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಈವರೆಗೂ ಉಭಯ ತಂಡಗಳು ಕೇವಲ 2 ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲೂ ಇಂಗ್ಲೆಂಡ್‌ ಗೆಲುವು ಸಾಧಿಸಿದೆ. 2009ರಲ್ಲಿ 48 ರನ್‌ ಮತ್ತು 2010ರಲ್ಲಿ 6 ವಿಕೆಟ್‌ಗಳ ಅಂತರದಲ್ಲಿ ಆಂಗ್ಲ ಪಡೆ ಜಯ ಸಾಧಿಸಿದೆ.

ಫೈನಲ್‌ ಪಂದ್ಯ ನಡೆಯಲಿರುವ ಎಂಸಿಜಿ ಮೈದಾನದಲ್ಲಿ ಎರಡೂ ತಂಡಗಳು ಈವರೆಗೂ ಟಿ20 ಪಂದ್ಯಗಳಲ್ಲಿ ಗೆಲುವು ಕಂಡಿಲ್ಲ.

Join Whatsapp