ಹಾವೇರಿ: ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಮಯ್ಯನವರಿಗೆ ಪಾಕಿಸ್ತಾನವೇ ಸೇಫ್ ಎಂದು ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ರಾಣೆಬೆನ್ನೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಚುನಾವಣೆಗೆ ಸ್ಪರ್ಧಿಸಲು ಪಾಕಿಸ್ತಾನವೇ ಸುರಕ್ಷಿತವಾಗಿದ್ದು, ಅಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪನವರಿಲ್ಲ. ಅಲ್ಲಿಗೆ ಹೋದರೆ ಕಾಟ ಕೊಡೋದಕ್ಕೆ ಡಿ.ಕೆ. ಶಿವಕುಮಾರ್ ಮತ್ತು ಖರ್ಗೆ ಇಬ್ಬರೂ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ಸಿದ್ಧವಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಸತ್ಯಕ್ಕೆ ದೂರವಾದುದು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್ನವರು ತುದಿಗಾಲ ಮೇಲೆ ನಿಂತಿದ್ದಾರೆ. ನಾವು ಆಯ್ಕೆ ಮಾಡಿ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ ಎಂಬ ಮುಳುಗುತ್ತಿರುವ ಹಡಗಿನಲ್ಲಿ ಯಾರು ಇರುತ್ತಾರೆ ಎಂದು ತಿರುಗೇಟು ನೀಡಿದರು.
ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಂಕರ್ ಅನರ್ಹ ಆದಾಗ ಎಂಎಲ್ಸಿ ಮಾಡಿದ್ದೇವೆ. ಅವರಿಗೆ ಮಂತ್ರಿ ಆಗಬೇಕು ಅಂತ ಆಸೆ ಇತ್ತು. ತಾಳ್ಮೆಯಿಂದ ಇದ್ದು ಬಿಜೆಪಿಯಲ್ಲಿ ಉಳಿದುಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಬಡ್ಡಿ ಸಮೇತ ಬರುತ್ತೆ, ಬಿಟ್ಟು ಹೋದರೆ ಡೆಪಾಸಿಟ್ ಕೂಡಾ ಹೋಗುತ್ತೆ ಎಂದು ನುಡಿದರು.