ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಮುಖ ವಿಶ್ವಾಸಮತ ಕಳೆದುಕೊಂಡಿದ್ದು, ನೂತನ ಪ್ರಧಾನಿಯನ್ನು ರಾಷ್ಟ್ರೀಯ ಅಸೆಂಬ್ಲಿ ಆಯ್ಕೆ ಮಾಡಲಿದೆ.
ಈ ಮೂಲಕ ಇಮ್ರಾನ್ ಖಾನ್ ಪಾಕಿಸ್ತಾನದ ಇತಿಹಾಸದಲ್ಲೇ ಅವಿಶ್ವಾಸಮತದಲ್ಲಿ ಪದವಿ ಕಳೆದುಕೊಂಡ ಮೊಟ್ಟದಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. ಎಪ್ರಿಲ್ 11ರಂದು ಮಧ್ಯಾಹ್ನ 2 ಗಂಟೆಗೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಸಭೆ ನಡೆಯಲಿದೆ.
ಪ್ರಮುಖ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಝ್) ಪಕ್ಷದ ಅಯಾಝ್ ಸಾದಿಕ್ “ಹೊಸ ಪ್ರಧಾನಿ ಹುದ್ದೆಗೆ ನಾಮಪತ್ರಗಳನ್ನು ರವಿವಾರ ಮಧ್ಯಾಹ್ನ 2 ಗಂಟೆಯ ಒಳಗಾಗಿ ಸಲ್ಲಿಸಬೇಕು. ಮಧ್ಯಾಹ್ನ 3 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ” ಎಂದು ಪ್ರಕಟಿಸಿದರು.