ಬಿಜೆಪಿ ಕಾರ್ಯಕ್ರಮಕ್ಕೆ ಗೈರುಹಾಜರಾದ ಪದ್ಮಶ್ರೀ ಹರೇಕಳ ಹಾಜಬ್ಬ

Prasthutha|

►ಪಕ್ಷದ ಕಾರ್ಯಕ್ರಮಕ್ಕೆ ಹಾಜಬ್ಬರನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದ ಬಿಜೆಪಿ

- Advertisement -

ಬೆಂಗಳೂರು : ಸರಕಾರಿ ಕಾರ್ಯಕ್ರಮ ಎಂದು ಭಾವಿಸಿ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ತೆರಳಿದ್ದ ಪದ್ಮಶ್ರೀ ಪುರಸ್ಕೃತ `ಅಕ್ಷರ ಸಂತ, ಹರೇಕಳ ಹಾಜಬ್ಬ ಅವರು ಕೊನೆಗಳಿಗೆಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿಯಾಗದೆ ವಾಪಾಸ್ ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಆಗಸ್ಟ್ 14ರ ಸೋಮವಾರ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ `ದೇಶ ವಿಭಜನೆ ಒಂದು ದುರಂತ ಕಥೆ ಸ್ಮೃತಿ ಕಾರ್ಯಕ್ರಮ’ಕ್ಕೆ ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಹಾಜಬ್ಬ ಅತಿಥಿಯಾಗಿ ಭಾಗಿಯಾಗಲಿರುವ ಬಗ್ಗೆ ಬಿಜೆಪಿ ಮುಖಂಡ ಎನ್. ರವಿಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.


ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಾಜಬ್ಬ ಅವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಿದ್ದರು. ಸ್ಥಳೀಯ ಬಿಜೆಪಿ ನಾಯಕರು ಕಾರು ಕೊಟ್ಟು ಹಾಜಬ್ಬ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದರು. ಬೆಂಗಳೂರಿನ ಐಷರಾಮಿ ಹೋಟೆಲ್ ಒಂದರಲ್ಲಿ ಹಾಜಬ್ಬ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಸತೀಶ್ ಕುಂಪಲ ಅವರು ಹಾಜಬ್ಬ ಅವರನ್ನು ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಒಪ್ಪಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು ಎಂದು ತಿಳಿದುಬಂದಿದೆ.


ಆಗಸ್ಟ್ 14ರಂದು ಬೆಳಗ್ಗೆ ಪತ್ರಿಕೆ ಮೂಲಕ ಈ ವಿಷಯ ತಿಳಿದ ಮಂಗಳೂರು ಮೂಲದ ಹಿರಿಯ ಪತ್ರಕರ್ತರೊಬ್ಬರು, ಮಂಗಳೂರಿನ ಆಪ್ತರಾಗಿರುವ ಲೇಖಕರೊಬ್ಬರ ಮೂಲಕ ಹಾಜಬ್ಬ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಬೆಂಗಳೂರಿನ ಹೋಟೆಲ್’ನಲ್ಲಿ ವಾಸ್ತವ್ಯ ಹೂಡಿದ್ದ ಹಾಜಬ್ಬ ಅವರು ಬಿಜೆಪಿ ನಾಯಕರು ಸರ್ಕಾರಿ ಕಾರ್ಯಕ್ರಮ ಎಂದು ಹೇಳಿ ತನ್ನನ್ನು ಕರೆಸಿಕೊಂಡಿರುವುದಾಗಿಯೂ, ಕಾರ್ಯಕ್ರಮದಲ್ಲಿ ಕೆಲವು ಸಚಿವರು ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದರು. ಯಾವ ಸಚಿವರು ಭಾಗವಹಿಸುತ್ತಾರೆ ಎಂದು ಕೇಳಿದಾಗ ಆರ್.ಅಶೋಕ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಭಾಗವಹಿಸುತ್ತಾರೆ ಎಂದು ಹಾಜಬ್ಬ ಹೇಳಿದ್ದರು. ಬಿಜೆಪಿ ನಾಯಕರು ಹಾಜಬ್ಬ ಅವರ ಮುಗ್ಧತೆಯನ್ನು ಬಳಸಿಕೊಂಡಿರುವುದನ್ನು ಅರಿತ ಆ ಹಿರಿಯ ಪತ್ರಕರ್ತರು, ಬಿಜೆಪಿ ಚುನಾವಣೆಯಲ್ಲಿ ಸೋತ ಬಳಿಕ ಆರ್.ಅಶೋಕ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಮಾಜಿ ಸಚಿವರಾಗಿದ್ದಾರೆ ಎಂದು ತಿಳಿಸಿ, ಈ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ವಿಲನ್’ಗಳ ರೀತಿ ಚಿತ್ರಿಸಿ ಬಿಜೆಪಿಯವರು ರಾಜಕೀಯವಾಗಿ ಲಾಭ ಪಡೆಯಲು ಈ ಕಾರ್ಯಕ್ರಮ ಮಾಡುತ್ತಿರುವುದಾಗಿಯೂ ಹಾಜಬ್ಬ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಮನವಿ ಕೂಡ ಮಾಡಿದ್ದರು.

ಕೊನೆಗಳಿಗೆಯಲ್ಲಿ ವಾಸ್ತವಾಂಶ ಮನವರಿಕೆ ಮಾಡಿಕೊಂಡ ಹಾಜಬ್ಬ ಅವರು ಬಿಜೆಪಿ ಕಚೇರಿಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ಗೈರುಹಾಜರಿಯಾಗಿದ್ದರು. ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಟೆಲ್’ನಿಂದ ಚೆಕ್ ಔಟ್ ಆಗಿ ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದೆ ಅದೇ ಕಾರಿನಲ್ಲಿ ನೇರವಾಗಿ ಮಂಗಳೂರಿಗೆ ವಾಪಾಸ್ ಬಂದಿದ್ದರು.

ಆಗಸ್ಟ್ 14ರಂದು ಬೆಳಗ್ಗೆ ನಡೆದ ಈ ಘಟನೆಯ ವಿವರ ಮಂಗಳೂರು ಮೂಲದ ಹಿರಿಯ ಪತ್ರಕರ್ತ ಮತ್ತು ಲೇಖಕರೊಬ್ಬರ ಮೂಲಕ ಪ್ರಸ್ತುತ ನ್ಯೂಸ್’ಗೆ ಲಭ್ಯವಾಗಿದೆ. ಬಿಜೆಪಿ ಪಕ್ಷ ತನ್ನ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಅವರನ್ನು ಬಳಸಿಕೊಂಡಿರುವುದು ಅಕ್ಷಮ್ಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಪಷ್ಟನೆ ಕೇಳಲು ಹಾಜಬ್ಬ ಅವರನ್ನು ಪ್ರಸ್ತುತ ನ್ಯೂಸ್ ಸಂಪರ್ಕಿಸಿದಾಗ, `ನಾನು ಸರ್ಕಾರದ ವಸ್ತುಪ್ರದರ್ಶನ ಕಾರ್ಯಕ್ರಮ ಎಂದು ಭಾವಿಸಿ ಬೆಂಗಳೂರಿಗೆ ಹೋಗಿದ್ದೆ, ಆದರೆ ಅದು ಒಂದು ಪಕ್ಷದ ಕಾರ್ಯಕ್ರಮ ಎಂದು ತಿಳಿದಾಗ ಅದರಲ್ಲಿ ಭಾಗಿವಹಿಸುವುದು ಸರಿಯಲ್ಲ ಎಂದು ನಿರ್ಧರಿಸಿ ವಾಪಾಸ್ ಬಂದಿದ್ದೇನೆ, ನನಗೆ ಯಾವುದೇ ರಾಜಕೀಯ ಇಲ್ಲ’ ಎಂದು ತಿಳಿಸಿದರು. ಈ ಬಗ್ಗೆ ಹಾಜಬ್ಬ ಅವರ ಜೊತೆ ಬೆಂಗಳೂರಿಗೆ ತೆರಳಿದ್ದ ಅವರ ಕುಟುಂಬ ಸದಸ್ಯ ಅಶ್ರಫ್ ಅವರು ಸ್ಪಷ್ಟನೆ ನೀಡಿದ್ದು, ನಾವು ಸರ್ಕಾರಿ ಕಾರ್ಯಕ್ರಮ ಎಂದು ಭಾವಿಸಿ ಬೆಂಗಳೂರಿಗೆ ಹೋಗಿದ್ದು ನಿಜ, ಬಿಜೆಪಿ ಪಕ್ಷದ ಕಾರ್ಯಕ್ರಮ ಎಂದು ಗೊತ್ತಾದ್ಮೇಲೆ ಕಾರ್ಯಕ್ರಮದಲ್ಲಿ ಭಾಗಿಯಾಗದೆ ವಾಪಸ್ ಬಂದಿರುವುದಾಗಿ ತಿಳಿಸಿದರು.





Join Whatsapp