ಗಲಭೆ, ಕೋಮು ಸಂಘರ್ಷಗಳ ಪ್ರಮಾಣದಲ್ಲಿ ಶೇ. 96ರಷ್ಟು ಏರಿಕೆ | ಎನ್ ಸಿಆರ್‌ಬಿ ವರದಿ ಬಹಿರಂಗ

Prasthutha|

ನವದೆಹಲಿ: 2020ರಲ್ಲಿ ಐಪಿಸಿಯ ವಿವಿಧ ಸೆಕ್ಷನ್ ಗಳಡಿ ದಾಖಲಾದ ಒಟ್ಟು 71,107 ಅಪರಾಧ ಪ್ರಕರಣಗಳಲ್ಲಿ ಸುಮಾರು ಶೇ.73ರಷ್ಟು ಪ್ರಕರಣಗಳು ಗಲಭೆಗೆ ಸಂಬಂಧಿಸಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

- Advertisement -


ಸಾರ್ವಜನಿಕ ಶಾಂತಿಯ ವಿರುದ್ಧದ ಅಪರಾಧದ ಭಾಗವಾಗಿದ್ದ ಗಲಭೆ ಪ್ರಕರಣಗಳ ಸಂಖ್ಯೆ 2019ರ ವೇಳೆಗೆ 51,606ರಷ್ಟಿತ್ತು. 2020ರಲ್ಲಿ 63,262 ಪ್ರಕರಣಗಳು ದಾಖಲಾಗುವ ಮೂಲಕ ಶೇ 12.4ರಷ್ಟು ಹೆಚ್ಚಳವಾಗಿದೆ. ಭಾರತೀಯ ಮಹಾನಗರಳಲ್ಲಿ ಅಂತಹ 4,437 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು (2,264) ಗಲಭೆಗೆ ಸಂಬಂಧಿಸಿವೆ. ಮಹಾನಗರಗಳಲ್ಲಿ ಸಾರ್ವಜನಿಕ ಶಾಂತಿಯ ವಿರುದ್ಧದ ಅಪರಾಧಗಳು 2019 ರಲ್ಲಿ 3,893 ಇತ್ತು. 2020ರಲ್ಲಿ ಅವುಗಳ ಸಂಖ್ಯೆ ಶೇ 14ರಷ್ಟು ಹೆಚ್ಚಳವಾಗಿದೆ. ಅಂತಹ 1,032 ಘಟನೆಗಳು ರಾಜಕೀಯ ಸ್ವರೂಪದ್ದಾಗಿದ್ದು 736 ಘಟನೆಗಳು ಜಾತಿ-ಸಂಬಂಧಿತ ಸಂಘರ್ಷಗಳಿಂದ ರೂಪುಗೊಂಡಿದ್ದವು. ಈ ಬಗೆಯ 233 ಘಟನೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.


ಆಂದೋಲನ ಅಥವಾ ಮೋರ್ಚಾಗೆ ಸಂಬಂಧಿಸಿದ 1,905 ಗಲಭೆಗಳಲ್ಲಿ, ಕೇರಳ 94% (1,798), ಮಹಾರಾಷ್ಟ್ರದಲ್ಲಿ 23 ಪ್ರಕರಣಗಳು ಮತ್ತು ಗುಜರಾತ್ನಲ್ಲಿ 9 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ವಿಚಾರದಲ್ಲಿ ಆಂದೋಲನ/ಮೋರ್ಚಾ ಸಮಯದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಒಂದೇ ಒಂದು ಘಟನೆ ವರದಿಯಾಗಿದೆ.
ಕೋಮು ಅಥವಾ ಧಾರ್ಮಿಕ ಅಂಶಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ 857 ಅಪರಾಧಗಳು ನಡೆದಿವೆ. 2019ಕ್ಕೆ ಹೋಲಿಸಿದರೆ ಈ ಬಗೆಯ ಪ್ರಕರಣಗಳಲ್ಲಿ ಶೇ 96ರಷ್ಟು ಏರಿಕೆಯಾಗಿದೆ; ಆಗ ಅಂತಹ 438 ಪ್ರಕರಣಗಳು ದಾಖಲಾಗಿದ್ದವು. ಕೋಮು ಘಟನೆಗೆ ಸಂಬಂಧಿಸಿದಂತೆ, ದೆಹಲಿಯಲ್ಲಿ 520 ಪ್ರಕರಣಗಳು, ಬಿಹಾರದಲ್ಲಿ 117 ಪ್ರಕರಣಗಳು, ಜಾರ್ಖಂಡ್ ಮತ್ತು ಹರಿಯಾಣದಲ್ಲಿ ತಲಾ 51 ಪ್ರಕರಣಗಳು ದಾಖಲಾಗಿವೆ.

- Advertisement -


ಕಾನೂನು ಸಂಘರ್ಷಕ್ಕೀಡಾದ ಬಾಲಾಪರಾಧಿಗಳ ಪ್ರಮಾಣ
2020ರಲ್ಲಿ, ಬಾಲಾಪರಾಧಿಗಳ ವಿರುದ್ಧ 29,768 ಪ್ರಕರಣಗಳು ದಾಖಲಾಗಿದ್ದು, 2019ರಲ್ಲಿ 32,269 ಪ್ರಕರಣಗಳು ದಾಖಲಾಗಿದ್ದವು. ಆ ಮೂಲಕ ಕಳೆದ ವರ್ಷ ಶೇ 7.8ರಷ್ಟು ಇಳಿಕೆ ಕಂಡುಬಂದಿದೆ. ಇಂತಹ ಪ್ರಕರಣಗಳಲ್ಲಿ 2019ರಲ್ಲಿ ಒಟ್ಟು 35,352 ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದು ಅದರಲ್ಲಿ 31,618 ಅಪ್ರಾಪ್ತ ವಯಸ್ಕರನ್ನು ಭಾರತೀಯ ದಂಡ ಸಂಹಿತೆಯ ಪ್ರಕರಣಗಳಡಿ ಮತ್ತು ಉಳಿದ 3,734 ಮಕ್ಕಳನ್ನು ವಿಶೇಷ ಮತ್ತು ಸ್ಥಳೀಯ ಕಾನೂನುಗಳ (ಎಸ್ಎಲ್ಎಲ್) ಅಡಿಯಲ್ಲಿ ಬಂಧಿಸಲಾಗಿತ್ತು.


ಐಪಿಸಿ ಮತ್ತು ಎಸ್ಎಲ್ಎಲ್ ಅಪರಾಧಗಳ ಅಡಿಯಲ್ಲಿ ಬಂಧಿಸಲಾದ ಬಹುತೇಕ ಬಾಲಾಪರಾಧಿಗಳು 16 ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ. ಅಲ್ಲದೆ ಕಳೆದ ವರ್ಷ ಬಾಲಾಪರಾಧಿಗಳಿಂದ ನಡೆದ ಅಪರಾಧ ದರ ಛತ್ತೀಸ್ಗಢದಲ್ಲಿ 21.4%, ಮಧ್ಯಪ್ರದೇಶದಲ್ಲಿ 16.8% ಮತ್ತು ತಮಿಳುನಾಡಿನಲ್ಲಿ 16.4% ರಷ್ಟು ಇತ್ತು. ದೇಶದಲ್ಲಿ ಬಾಲಾಪರಾಧಿಗಳವಿರುದ್ಧ ವರದಿಯಾಗಿರುವ 842 ಕೊಲೆಪ್ರಕರಣಗಳಲ್ಲಿ, 10 ಬಾಲಾಪರಾಧಿಗಳು 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 12 – 16ರ ವಯೋಮಾನದಲ್ಲಿ 250 ಬಾಲಾಪರಾಧಿಗಳು ಹುಡುಗರಾಗಿದ್ದರೆ, 10 ಬಾಲಾಪರಾಧಿಗಳು ಹುಡುಗಿಯರಾಗಿದ್ದಾರೆ ಎಂದು ವರದಿ ತಿಳಿಸಿದೆ.


ಮಾದಕವಸ್ತು ಪ್ರಕರಣಗಳು
ಪೊಲೀಸರು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವುದು 2020 ರಲ್ಲಿ ಆಘಾತಕರ ಪ್ರಮಾಣದಲ್ಲಿ ಏರಿಕೆ ದಾಖಲಿಸಿದ್ದು ಕೋವಿಡ್ನಿಂದಾಗಿ ಲಾಕ್ಡೌನ್ ಜಾರಿಯಲ್ಲಿದ್ದರೂ ಮಾದಕ ವಸ್ತು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಕೊಕೇನ್ ನಂತಹ ಪದಾರ್ಥಗಳ ವಶಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಶೇ. 1350 ಏರಿಕೆ ಕಂಡು ಬಂದಿದ್ದು ಗಾಂಜಾದಂತಹ ಪದಾರ್ಥಗಳನ್ನು ವಶಕ್ಕೆ ಪಡೆದ ಪ್ರಕರಣಗಳ ಸಂಖ್ಯೆಯಲ್ಲಿ ಶೇ 129ರಷ್ಟು ಏರಿಕೆಯಾಗಿದೆ.


2020ರಲ್ಲಿ 13.69 ಲಕ್ಷ ಕಿಲೋ ಗ್ರಾಂನಷ್ಟು ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ 11.06 ಲಕ್ಷ ಕೆಜಿಯಷ್ಟು ಅಮಲು ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದ್ದು ಕಳೆದ ವರ್ಷ ವಶಪಡಿಸಿಕೊಂಡ ಮಾದಕ ದ್ರವ್ಯಗಳಿಗೆ ಹೋಲಿಸಿದರೆ ಶೇ 24ರಷ್ಟು ಏರಿಕೆ ಕಂಡು ಬಂದಿದೆ.

Join Whatsapp