ಜಾರ್ಖಂಡ್ ಕೇಬಲ್ ಕಾರು ದುರಂತ: ಮೂರಕ್ಕೇರಿದ ಸಾವಿನ ಸಂಖ್ಯೆ; 3 ಮಂದಿ ಕ್ಯಾಬಿನ್ ನಲ್ಲಿ ಸಿಲುಕಿರುವ ಶಂಕೆ

Prasthutha|

ರಾಂಚಿ: ಜಾರ್ಖಂಡ್ ನ ದಿಯೋಘರ್ ಜಿಲ್ಲೆಯಲ್ಲಿ ಕೇಬಲ್ ಕಾರು ದುರಂತದ 40 ಗಂಟೆಗಳ ಬಳಿಕವೂ ಮೂವರು ಕ್ಯಾಬಿನ್ ನಲ್ಲಿ ಸಿಲುಕಿಕೊಂಡಿದ್ದು, ಒಟ್ಟು ಮೂವರು ಈ ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

- Advertisement -

ಈ ಮಧ್ಯೆ 40 ಕ್ಕೂ ಅಧಿಕ ಸಂತ್ರಸ್ತರನ್ನು ವಾಯುಪಡೆಯ ಹೆಲಿಕಾಪ್ಟರ್ ಮತ್ತು ಹತ್ತಾರು ಅಧಿಕಾರಿಗಳನ್ನೊಳಗೊಂಡ ತಂಡ ಅಪಾಯಕಾರಿ ಕಾರ್ಯಾಚರಣೆಯೊಂದರಲ್ಲಿ ರಕ್ಷಿಸಿದೆ ಎಂದು ಹೇಳಲಾಗಿದೆ.

ಭಾರತೀಯ ವಾಯುಪಡೆ, ಭೂ ಸೇನೆ, ಇಂಡೋ- ಟಿಬೆಟಿಯನ್ ಗಡಿ ಪೊಲೀಸ್ ತಂಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NRDF) ಜಂಟಿ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ದಿಯೋಘರ್ ಉಪ ಕಮಿಷನರ್ ಮಂಜುನಾಥ್ ಭಜಂತ್ರಿ ತಿಳಿಸಿದ್ದಾರೆ.

- Advertisement -

ಡ್ರೋನ್‌ಗಳ ನೆರವಿನಿಂದ ದುರಂತದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ನೀರು ಮತ್ತು ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ನಿನ್ನೆ ಸಂಜೆ ಹೆಲಿಕಾಪ್ಟರ್ ನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಮೂರಕ್ಕೇರಿದಂತಾಗಿದೆ. ಹೆಲಿಕಾಪ್ಟರ್ ನಿಂದ ಬೀಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಸಕ್ತ ಜಾರ್ಖಂಡ್’ನಲ್ಲಿ ಕೇಬಲ್ ಕಾರು ದುರಂತಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆದೇಶಿಸಿದ್ದಾರೆ.



Join Whatsapp