ಹೊಸದಿಲ್ಲಿ: ಬಿಜೆಪಿ ಮುಖಂಡ ಮತ್ತು ಹರಿಯಾಣ ಡೆಪ್ಯುಟಿ ಸ್ಪೀಕರ್ ರಣಬೀರ್ ಗಂಗ್ವಾ ಅವರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಸುಮಾರು 100ಕ್ಕೂ ಅಧಿಕ ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. “ಬ್ರಿಟಿಷ್ ಯುಗದ ಈ ಕಾನೂನು ಇನ್ನೂ ಈ ದೇಶಕ್ಕೆ ಅಗತ್ಯವಿದೆಯೇ” ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರವೂ ಕೇಂದ್ರ ಸರಕಾರ ರೈತರ ವಿರುದ್ಧ ದೇಶದ್ರೋಹ ಕಾನೂನನ್ನು ಹೇರಿದೆ.
ಜುಲೈ 11 ರಂದು ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ-ಜನನಾಯಕ್ ಜನತಾ ಪಕ್ಷದ ಸಮ್ಮಿಶ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗಂಗ್ವಾ ಅವರ ಕಾರಿನ ಮೇಲೆ ದಾಳಿ ನಡೆದಿತ್ತು. ಅದೇ ದಿನ ರೈತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ದೇಶದ್ರೋಹದ ಹೊರತಾಗಿ, ರೈತರ ಮೇಲೆ ಕೊಲೆ ಯತ್ನ ಪ್ರಕರಣವನ್ನೂ ದಾಖಲಿಸಲಾಗಿದೆ. ಪ್ರತಿಭಟನೆಗೆ ನೆತೃತ್ವ ವಹಿಸಿದ ರೈತ ನಾಯಕರಾದ ಹರಿಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸಿದ್ದು, ಈ ಆರೋಪಗಳೆಲ್ಲಾ ಕಟ್ಟುಕಥೆ ಎಂದು ಆರೋಪಿಸಿದೆ.
ಬ್ರಿಟಿಷ್ ಯುಗದ ದೇಶದ್ರೋಹ ಕಾನೂನನ್ನು “ವಸಾಹತುಶಾಹಿ” ಎಂದು ಬಣ್ಣಿಸಿದ್ದ ಸುಪ್ರೀಂ ಕೋರ್ಟ್, “ಸ್ವಾತಂತ್ರ್ಯ ನಂತರದ 75 ವರ್ಷಗಳ ನಂತರವೂ ಈ ಕಾನೂನು ಇನ್ನೂ ಈ ದೇಶಕ್ಕೆ ಅಗತ್ಯವಿದೆಯೇ” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.