ಕೊಡಗಿನ ರಾಮಕೊಲ್ಲಿಯಲ್ಲಿ ಜಲಸ್ಫೋಟ: ಅಪಾಯದಂಚಿನಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು

Prasthutha|

ಕೊಡಗು: ದಿನೇ ದಿನೇ ಕೊಡಗಿನಲ್ಲಿ ಭೂ ಕುಸಿತದ ಆತಂಕ ಹೆಚ್ಚಾಗುತ್ತಿದ್ದು, ಇದೀಗ ರಾಮಕೊಲ್ಲಿಯ ಮೇಲ್ಭಾಗದಲ್ಲಿರುವ ಬೆಟ್ಟದ ಬರೋಬ್ಬರಿ 25 ಎಕರೆಯಷ್ಟು ಪ್ರದೇಶ ಬಿರುಕು ಬಿಟ್ಟು, ಐದಡಿ ಆಳಕ್ಕೆ ಕುಸಿದು ನಿಂತಿದೆ. ಈ ಬಿರುಕು ಕಾರಣ ರಾಮಕೊಲ್ಲಿ, ಕಡ್ಯದ ಮನೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ 100 ಕ್ಕೂ ಹೆಚ್ಚು ಕುಟುಂಬಗಳು ಅಪಾಯದಲ್ಲಿವೆ.

- Advertisement -

ಬಿರುಕು ಬಿಟ್ಟಿರುವ ಬೆಟ್ಟದ ತಳಭಾಗದಲ್ಲಿ ಪದೇ ಪದೇ ಜಲಸ್ಫೋಟವಾಗುತ್ತಿದೆ. ಭಾರೀ ಶಬ್ಧದೊಂದಿಗೆ ಜಲಸ್ಫೋಟ ಆದಂತೆಲ್ಲಾ ದೊಡ್ಡ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ರಭಸವಾಗಿ ಹರಿಯುತ್ತಿದೆ. ಬುಧವಾರ ಸಂಜೆ ಆರೂವರೆ ಗಂಟೆ ವೇಳೆಗೆ ಭಾರಿ ಶಬ್ಧದೊಂದಿಗೆ ಜಲಸ್ಫೋಟವಾಗಿದೆ. ಅದರ ರಭಸಕ್ಕೆ ಕಡ್ಯದ ಮನೆ, ರಾಮಕೊಲ್ಲಿ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಸದ್ಯ ಮೂರು ದಿನಗಳಿಂದ ಮಳೆ ಸಲ್ಪ ಬಿಡುವು ನೀಡಿರುವುದು ಜನರು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಆದರೆ ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಮಳೆ ಸುರಿಯುವ ಸಾಧ್ಯತೆ ಇದ್ದು, ಒಂದು ವೇಳೆ ಭಾರಿ ಮಳೆ ಸುರಿದರೆ, ಈ ಬಿರುಕುಗಳ ಮೂಲಕ ಬಾರಿ ನೀರು ಭೂಮಿಯೊಡಲು ಸೇರಿ, ಬಿರುಕು ಬಿಟ್ಟು ಸ್ವಲ್ಪ ಕುಸಿದಿರುವ ಇಡೀ ಬೆಟ್ಟವೇ ಕುಸಿಯುವ ಆತಂಕವಿದೆ.

- Advertisement -

ಇನ್ನು ಬೆಟ್ಟ ಕುಸಿದಿದ್ದೆ ಆದಲ್ಲಿ ಅದರಿಂದಾಗುವ ಅಪಾಯ ಊಹಿಸುವುದಕ್ಕೂ ಅಸಾಧ್ಯ. ಅದರಿಂದ ಕಡ್ಯದ ಮನೆ, ರಾಮಕೊಲ್ಲಿಯಲ್ಲಿರುವ ಮನೆಗಳು ಕಣ್ಮರೆಯಾಗಿಬಿಡುವ ಆತಂಕವಿದೆ. ಹೀಗಾಗಿ ಜನರು ನಮಗೆ ಎರಡು ತಿಂಗಳ ಮಟ್ಟಿಗಾದರೂ ಸರ್ಕಾರ ಮನೆ ಬಾಡಿಗೆ ಕೊಟ್ಟರೆ ನಾವು ಇಲ್ಲಿಂದ ಬೇರೆಡೆ ಹೋಗುತ್ತೇವೆ ಎನ್ನುತ್ತಿದ್ದಾರೆ.



Join Whatsapp