ನಮ್ಮ ರಾಷ್ಟ್ರಪತಿ ಸೆರಗು ಧರಿಸುತ್ತಾರೆ: ಇದು ಕೂಡಾ ಪಿಎಫ್ಐನ ಪಿತೂರಿಯೇ ಎಂದು ಪ್ರಶ್ನಿಸಿದ ಸಿ.ಎಂ. ಇಬ್ರಾಹಿಂ

Prasthutha|

ಭಾಷೆಯ ಆಧಾರದಲ್ಲಿ ಬದಲಾಗುವ ಹೆಸರಿಗೆ ನೀವು ಜಾತಿಯ ಬಣ್ಣ ಕಟ್ಟಬೇಡಿ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ

- Advertisement -

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯಿಂದ ಹಿಡಿದು ನಮ್ಮ ಈಗಿನ ಭಾರತದ ರಾಷ್ಟ್ರಪತಿ ಕೂಡ ಸೆರಗು ಧರಿಸುತ್ತಾರೆ, ಇದು ಭಾರತದ ಸಂಸ್ಕೃತಿಯಾಗಿದ್ದು, ‘ಘೂಂಘಾಟ್’ ಪಿಎಫ್ಐನ ಪಿತೂರಿಯೇ? ಹಿಜಾಬ್ ಇರಲಿ, ಸೆರಗು ಇರಲಿ, ಎಲ್ಲವೂ ಒಂದೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಕರ್ನಾಟಕದ ಹಿಜಾಬ್ ಬ್ಯಾನ್ ಕೇಸಿನ ವಾದವಿವಾದಗಳು ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ನಡೆಯುತ್ತಿದೆ. ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ  ಜನತಾದಳ ರಾಜ್ಯಾಧ್ಯಕ್ಷರಾದ  ಸಿ ಎಂ.ಇಬ್ರಾಹಿಂ ಅವರು ಹಿಂದೂ ಮಹಿಳೆಯರು ತಲೆ ಹಾಗೂ ಹೆಗಲಿಗೆ  ಹೊದ್ದುಕೊಳ್ಳುವ ಸೆರಗು ಹಾಗೂ ಮುಸ್ಲಿಂ ಮಹಿಳೆಯರ ಹಿಜಾಬ್ ಅನ್ನು ಒಂದಕ್ಕೊಂದು ಹೋಲಿಸಿ ಮಾತನಾಡಿದ್ದು,ಇಂದಿರಾ ಗಾಂಧಿಯ ತಲೆಯ ಮೇಲೆ ಸೆರಗಿತ್ತು, ಭಾರತದ ರಾಷ್ಟ್ರಪತಿಯ ತಲೆಯ ಮೇಲೆ ಸೆರಗು ಇತ್ತು. ಅವರ ತಲೆಯಲ್ಲಿ ಇದ್ದ ‘ಘೂಂಘಟ್’ ಪಿಎಫ್ಐಯ ಪಿತೂರಿಯೆ? ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

ಹಿಜಾಬ್ ಪ್ರಕರಣದ ಹಿಂದೆ ಪಿಎಫ್ಐ ಕೈವಾಡವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರವು  ಆರೋಪಿಸಿತ್ತು. 2021 ರ ಮೊದಲು ಯಾವ ವಿದ್ಯಾರ್ಥಿಯೂ ಹಿಜಾಬ್ ಧರಿಸುತ್ತಿರಲಿಲ್ಲ ಎಂದೂ ತನ್ನ ವಾದವನ್ನು ಮಂಡಿಸಿತ್ತು.  ಶಾಲಾ ಕಾಲೇಜುಗಳಲ್ಲಿ ಏಕತೆ, ಸಮಗ್ರತೆ ಹಾಗೂ ಸಾಮಾಜಿಕ ಸಹಬಾಳ್ವೆಯನ್ನು ರಕ್ಷಿಸುವ ಹೆಸರಿನಲ್ಲಿ,  2022ರ ಫೆಬ್ರವರಿ 5ರಂದು ಕರ್ನಾಟಕ ಸರ್ಕಾರವು ಹಿಜಾಬ್ ಬ್ಯಾನ್ ಕಾನೂನು ಜಾರಿಗೆ ತಂದಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ ಎಂ ಇಬ್ರಾಹಿಂ, ರಾಜಾಸ್ಥಾನದ ಮಹಿಳೆಯರ ಉದಾಹರಣೆ ನೀಡುತ್ತಾ, ರಜಪೂತ ಮಹಿಳೆಯರು ಯಾರಿಗೂ ತಮ್ಮ ಮುಖ ತೋರಿಸುವುದಿಲ್ಲ, ಮುಖಮುಚ್ಚುವಂತೆ ಉದ್ದದ ಘೂಂಘಟ್ ಧರಿಸುತ್ತಾರೆ.  ಇದು ಇಸ್ಲಾಂ ಸಂಪ್ರದಾಯವೇ?  ಎಂದು ಪ್ರಶ್ನಿಸಿದರು.  ಹಿಜಾಬ್ ಹಾಗೂ ಘೂಂಘಟ್ ಗೆ ಕೇವಲ ಹೆಸರಿನ ವ್ಯತ್ಯಾಸವಷ್ಟೇ ಹೊರತು ಕಾರ್ಯವೈಖರಿಯದ್ದಲ್ಲ ಎಂಬ ಮಾತುಗಳನ್ನು ತಿಳಿಸಿದರು

ಕಿತ್ತೂರು ರಾಣಿ ಚೆನ್ನಮ್ಮಾ ಅವರ ತಲೆಯಲ್ಲಿ ಇದ್ದ ವಸ್ತ್ರವನ್ನು ನೀವು ಹಿಜಾಬ್ ಹೇಳಿ ಅಥವಾ ಸೆರಗು ಎಂದು ಹೇಳಿ, ಆದರೆ ಅವರೆಡೂ ಒಂದೇ ಆಗಿದೆ. ನೀರನ್ನು ಹಿಂದಿಯಲ್ಲಿ ಪಾನಿ ಎನ್ನುತ್ತಾರೆ, ಇಂಗ್ಲಿಷ್ನಲ್ಲಿ ವಾಟರ್ ಎಂದು ಹೇಳುತ್ತಾರೆ. ವಾಟರ್ ಎಂದ ಕೂಡಲೆ ಅದು ಬ್ರಿಟೀಷರದ್ದು ಆಗುವುದಿಲ್ಲ ಎಂದು ಅವರು ಹೇಳಿದರು. ಯಾವುದೆ ಭಾಷೆಯಲ್ಲಿ ಕರೆದರೂ ನೀರು ನೀರೇ ಆಗಿರುತ್ತದೆ. ಭಾಷೆಯ ಆಧಾರದಲ್ಲಿ ಅದರ ಹೆಸರು ಮಾತ್ರ ಬದಲಾಗುತ್ತದೆ. ಅದಕ್ಕೆ ನೀವು ಜಾತಿಯ ಹೆಸರು ಯಾಕೆ ನೀಡುತ್ತೀರಿ? ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಶಾಲೆಯಲ್ಲಿ ಹಿಜಾಬ್ ಧರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಡೆಸುತ್ತಿದ್ದು, ವಿದ್ಯಾರ್ಥಿನಿಯರ ವಾದಗಳು ಇಂದು ಮುಗಿದಿದೆ.

Join Whatsapp