ಸಮಾನ ಹಕ್ಕುಗಳಿರುವ ಹೊಸ ಭಾರತದ ನಿರ್ಮಾಣವೇ ನಮ್ಮ ಧ್ಯೇಯ: ಯಾಸಿರ್ ಹಸನ್

Prasthutha|

ಸಂದರ್ಶನ: ಝಿಯಾವುಲ್ ಹಖ್

- Advertisement -

1. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಧ್ಯೇಯೋದ್ದೇಶಗಳನ್ನು ವಿವರಿಸಬಹುದೇ?

 ಭಾರತವು ಒಂದು ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರ. ನಮ್ಮ ಸಂವಿಧಾನವು ಎಲ್ಲಾ ನಾಗರಿಕರಿಗೆ ತಾರತಮ್ಯರಹಿತವಾದ ಸಮಾನ ನ್ಯಾಯವನ್ನು ಖಾತರಿಪಡಿಸುತ್ತದೆ. ಆದರೆ ದುರದೃಷ್ಟವಶಾತ್ ದೇಶದ ಶೇ.70 ರಷ್ಟು ಜನತೆ ಇಂದು ಅಭಿವೃದ್ಧಿಯಿಂದ ವಂಚಿತವಾಗಿದೆ. ಸ್ವಾತಂತ್ರ್ಯದ 70 ದಶಕಗಳ ನಂತರವೂ ದಲಿತ ಮತ್ತು ಬುಡಕಟ್ಟು ಸಮುದಾಯದ ಜೊತೆಗೆ ಮುಸ್ಲಿಮ್ ಸಮುದಾಯವೂ ಕೂಡ ಅತ್ಯಂತ ಹಿಂದುಳಿದಿದೆ ಮತ್ತು ದಮನಿಸಲ್ಪಟ್ಟಿದೆ. ವಾಸ್ತವದಲ್ಲಿ ಈ ಸಮುದಾಯಗಳು ಅಧಿಕಾರಶಾಹಿ ಮತ್ತು ಕಾರ್ಪೋರೇಟ್ ಬಂಡವಾಳಶಾಹಿಗಳ ಶೋಷಣೆ, ದಬ್ಬಾಳಿಕೆಯ ಸಂತ್ರಸ್ತರಾಗಿವೆ. ನಾಗರಿಕ ಹಕ್ಕುಗಳನ್ನು ಹತ್ತಿಕ್ಕುವ ಕಡೆಗಳಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವುದು ಆ ಸಂದರ್ಭದ ಅನಿವಾರ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಎಲ್ಲಾ ನಾಗರಿಕರಿಗೂ ಸಮಾನ ಹಕ್ಕುಗಳು ಹೊಂದಿರುವ ಹೊಸ ಭಾರತದ ಉದಾತ್ತ ಧ್ಯೇಯವನ್ನು ಹೊಂದಿದೆ. ಸ್ವಾತಂತ್ರ್ಯ, ನ್ಯಾಯ, ರಕ್ಷಣೆಯ ಸಂದೇಶವನ್ನು ಒಳಗೊಂಡ ಈ ಆಂದೋಲನವು ಇಂದು ದೇಶದ ಮೂಲೆ ಮೂಲೆಗೂ ತಲುಪಿದ್ದು, ಅವಕಾಶ ವಂಚಿತ ಜನರು ವಿಶೇಷವಾಗಿ ಯುವಜನರು ಇದಕ್ಕೆ ಆಕರ್ಷಿತರಾಗಿ ದೊಡ್ಡ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿದ್ದಾರೆ.

- Advertisement -

2. ಪ್ರಸಕ್ತ ಸಂಘಟನಾ ಶಕ್ತಿ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸುತ್ತೀರಾ?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ರಾಜ್ಯದ 31 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಲಕ್ಷಕ್ಕೂ ಮಿಕ್ಕಿದ ಕೇಡರ್‌ ಗಳು ಮತ್ತು ಲಕ್ಷಾಂತರ ಮಂದಿ ಬೆಂಬಲಿಗರನ್ನು ಹೊಂದಿರುವ ಒಂದು ಜನಾಂದೋಲನವಾಗಿದೆ. ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಜನರನ್ನು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಂಘಟನೆಗೆ ಸಾಧ್ಯವಾಗಿದೆ. ಸ್ವಾತಂತ್ರೋತ್ತರ ಇಂಡಿಯಾದಲ್ಲಿ ಶಿಕ್ಷಣ, ಉದ್ಯೋಗ, ಅಧಿಕಾರದಿಂದ ವಂಚಿತಗೊಂಡ ಸಮುದಾಯದ ಮಧ್ಯೆ ಈ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪಾಲನ್ನು ಖಚಿತಪಡಿಸಬೇಕೆಂಬ ಪ್ರಜ್ಞೆಯನ್ನು ಜನರ ಮಧ್ಯೆ ಬೆಳೆಸಿದೆ. ಇದು ಕಾನೂನು ಹೋರಾಟ, ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಶೈಕ್ಷಣಿಕ ಸಬಲೀಕರಣ, ಸಮುದಾಯ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ ಮೊದಲಾದವುಗಳನ್ನು ತನ್ನ ಪ್ರಮುಖ ಕಾರ್ಯಕ್ಷೇತ್ರವನ್ನಾಗಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ಕೇಡರ್‌ ಗಳಿಗೆ ಶಾರೀರಿಕ ಮತ್ತು ಬೌದ್ಧಿಕ ತರಬೇತಿಗಳನ್ನು ನೀಡುತ್ತಾ ಅವರನ್ನು ಸಂಸ್ಕಾರಯುತ, ಜವಾಬ್ದಾರಿಯುತ ಪೌರರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ಕಾಲದ ಆತಂಕಕಾರಿ ಸನ್ನಿವೇಶದಲ್ಲೂ ಸಂಘಟನೆಯ ಕೇಡರ್‌ ಗಳು ಸೇವಾ ಚಟುವಟಿಕೆ ಧರ್ಮ ಭೇದವಿಲ್ಲದೆ ಮತ್ತು ಮೃತದೇಹ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಂಡದ್ದು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚಾ ವಿಷಯವಾಗಿತ್ತು. ಅದೇ ರೀತಿ ನೈಸರ್ಗಿಕ ವಿಕೋಪಗಳ ಅಪಾಯಕಾರಿ ಸನ್ನಿವೇಶದಲ್ಲೂ ನಮ್ಮ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘಟನೆಯು ರಕ್ಷಣಾ ಮತ್ತು ಪರಿಹಾರ ತಂಡವನ್ನು ರಚಿಸಿದ್ದು, ತರಬೇತು ಹೊಂದಿದ ಮತ್ತು ಸನ್ನದ್ಧವಾಗಿರುವ ಕಾರ್ಯಕರ್ತರ ಪಡೆ, ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸುತ್ತಿದೆ. ಇದಕ್ಕೆ ಸಂಘಟನೆಯು ಕಾರ್ಯಕರ್ತರಲ್ಲಿ ಮೂಡಿಸಿರುವ ಸಮರ್ಪಣಾ ಮನೋಭಾವ ಮತ್ತು ಆತ್ಮಸ್ಥೆೃರ್ಯವೇ ಪ್ರಮುಖ ಕಾರಣವಾಗಿದೆ.

3. ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಗಳ ಹಿಂದೆಯೂ ಪಾಪ್ಯುಲರ್ ಫ್ರಂಟ್ ಹೆಸರು ಕೇಳಿ ಬರುತ್ತಿದೆ, ಏಕೆ?

ಇದೀಗ ಕೇಂದ್ರದಲ್ಲಿ ಫ್ಯಾಶಿಸ್ಟ್ ಬಿಜೆಪಿ ಆಡಳಿತದಲ್ಲಿದೆ. ಸಂಘಟನೆ ತನ್ನ ಪ್ರಾರಂಭ ಕಾಲದಿಂದಲೇ ಬಿಜೆಪಿ- ಆರೆಸ್ಸೆಸ್ ಸಿದ್ಧಾಂತವನ್ನು ವಿರೋಧಿಸುತ್ತಲೇ ಬಂದಿದೆ. ಇಂದಿಗೂ ಅದನ್ನು ಮುಂದುವರಿಸುತ್ತಿದೆ. ಪ್ರಜಾಪ್ರಭುತ್ವವನ್ನು ನಾಶಪಡಿಸುವ ಬಿಜೆಪಿಯ ವಿಷಕಾರಿ ಸಿದ್ಧಾಂತ ಇದೀಗ ಸರ್ವಾಧಿಕಾರದತ್ತ ಹೊರಳುತ್ತಿದೆ. ಧಾರ್ಮಿಕ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಕೀಯ, ಸಾಮಾಜಿಕ ಸ್ವಾತಂತ್ರ್ಯವನ್ನು ಹಂತ ಹಂತವಾಗಿ ಕಸಿದುಕೊಳ್ಳಲಾಗುತ್ತಿದೆ. ಪ್ರಸ್ತುತ ಫ್ಯಾಶಿಸ್ಟ್ ಆಡಳಿತದಲ್ಲಿ ಮುಸ್ಲಿಮರು-ದಲಿತರು, ಮಹಿಳೆಯರ ಪ್ರಾಣ, ಮಾನ, ಸೊತ್ತುಗಳು ಅತ್ಯಂತ ಅಪಾಯದಲ್ಲಿವೆ. ಇದರ ವಿರುದ್ಧ ಪಾಪ್ಯುಲರ್ ಫ್ರಂಟ್ ದಿಟ್ಟವಾಗಿ ದನಿಯೆಬ್ಬಿಸುತ್ತಿದೆ. ಸರ್ವಾಧಿಕಾರವು ಯಾವತ್ತೂ ಭಿನ್ನ ಧ್ವನಿಗಳನ್ನು ಸಹಿಸುವುದಿಲ್ಲ. ಸರ್ಕಾರದ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನವಿರೋಧಿ ನೀತಿಯನ್ನು ಪಾಪ್ಯುಲರ್ ಫ್ರಂಟ್ ವಿರೋಧಿಸುವ ಕಾರಣದಿಂದ ನಿರಂತರವಾಗಿ ಆರೋಪಕ್ಕೊಳಗಾಗುತ್ತಿದೆ. ದುರದೃಷ್ಟವಶಾತ್ ಇಲ್ಲಿ ವಿರೋಧ ಪಕ್ಷಗಳು ತೀರಾ ದುರ್ಬಲವಾಗಿದ್ದು, ಅದೇ ವೇಳೆ ಪಾಪ್ಯುಲರ್ ಫ್ರಂಟ್ ವಿಪಕ್ಷದ ಪಾತ್ರವನ್ನು ವಹಿಸುತ್ತಿದೆ. ಆದ್ದರಿಂದ ಪ್ರತಿಯೊಂದು ಸಂದರ್ಭದಲ್ಲೂ ಸಂಘಟನೆಯನ್ನು ಗುರಿಪಡಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ.

4. ಇತ್ತೀಚಿಗೆ ತಮ್ಮ ಸಂಘಟನೆಯ ಕಚೇರಿಗಳು ಮತ್ತು ನಾಯಕರ ಮನೆಗಳ ಮೇಲೆ ನಡೆದ ಈಡಿ ದಾಳಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಈಗಾಗಲೇ ಹೇಳಿದಂತೆ ಸರ್ಕಾರವನ್ನು ಪ್ರಶ್ನಿಸುವ ಯಾರನ್ನೂ ಬಿಡಲಾರೆವು ಎನ್ನುವ ಧಿಮಾಕನ್ನು ಫ್ಯಾಶಿಸ್ಟ್ ಸರ್ಕಾರ ತೋರುತ್ತಿದೆ. ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಅದು ತನಿಖಾ ಏಜೆನ್ಸಿಗಳನ್ನು ಬಳಸುತ್ತಿದೆ. ತಮ್ಮನ್ನು ವಿಮರ್ಶಿಸುವ, ಟೀಕಿಸುವ ಮತ್ತು ಪ್ರಶ್ನಿಸುವ ಯಾರನ್ನೂ ಅದು ಬಿಡುತ್ತಿಲ್ಲ. ಆದ್ದರಿಂದ ಈ ನಮ್ಮ ಹೋರಾಟವನ್ನು ಹತ್ತಿಕ್ಕಿ ಸಂಘಟನೆಯ ಬಾಯ್ಮುಚ್ಚಿಸಲು ಅದು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಸಂಘಟನೆಯ ನಾಯಕರ ಮೇಲೂ ದಾಳಿ ನಡೆದಿದೆ. ಸರ್ವಾಧಿಕಾರಿ ಹಿಟ್ಲರ್ ಕೂಡ ತನ್ನ ವಿರೋಧಿಗಳನ್ನು, ಭಿನ್ನ ಧ್ವನಿಗಳ ಸದ್ದಡಗಿಸಲು ಇದೇ ರೀತಿಯ ಪ್ರತೀಕಾರದ ಕಾರ್ಯತಂತ್ರವನ್ನು ಅನುಸರಿಸಿದ್ದ. ಇದೀಗ ಬಿಜೆಪಿಯ ಧೋರಣೆಯು ಇದೇ ಕಾರ್ಯತಂತ್ರದ ಮುಂದುವರಿದ ಭಾಗವಾಗಿದೆ.

5. ಪಾಪ್ಯುಲರ್ ಫ್ರಂಟ್ ಮೇಲೆ ಕೋಮುವಾದಿ ಸಂಘಟನೆ ಎಂಬ ಆರೋಪವಿದೆ. ಈ ಬಗ್ಗೆ ಏನು ಹೇಳುವಿರಿ?

ಪಾಪ್ಯುಲರ್ ಫ್ರಂಟ್ ಮೊತ್ತ ಮೊದಲು ತನ್ನ ಸಮುದಾಯದ ಬಗ್ಗೆ ಧ್ವನಿಯೆತ್ತುತ್ತಿದೆ. ಆದರೆ ಅದನ್ನೇ ತೋರಿಸಿ ಫ್ಯಾಶಿಸ್ಟರು, ಸಂಘಟನೆಯನ್ನು ಕೋಮುವಾದಿ ಎನ್ನುತ್ತಿದ್ದಾರೆ. ತನ್ನ ಸಮುದಾಯದ ಪರವಾಗಿ ಮಾತನಾಡುವುದು, ಅವರ ಹಕ್ಕುಗಳ ಕುರಿತು ಪ್ರಜ್ಞಾವಂತಿಕೆ ಮೂಡಿಸುವುದು, ಅವರ ಮಧ್ಯೆ ಸ್ವಾಭಿಮಾನವನ್ನು ಬೆಳೆಸುವುದು, ಅವರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು ಇವೆಲ್ಲವೂ ಸಮುದಾಯವೊಂದರ ಸಬಲೀಕರಣಕ್ಕೆ ಸಹಾಯಕವಾಗುವಂತಹ ವಿಚಾರಗಳು. ದೇಶದಲ್ಲಿರುವ ಶೇಕಡಾ 14ರಷ್ಟು ಮುಸ್ಲಿಮರ ಸಬಲೀಕರಣ ವಿಚಾರದಲ್ಲಿ ಸಂಘಟನೆ ದುಡಿಯುತ್ತದೆಯೆಂದರೆ ಅದು ಈ ದೇಶದ ಅಷ್ಟೂ ಜನರ ಸಬಲೀಕರಣದ ಪ್ರಯತ್ನ ನಡೆಸಿದಂತೆ. ಅದರೊಂದಿಗೆ ದೇಶದ ವಿವಿಧ ಸಮುದಾಯಗಳು ಇದೇ ರೀತಿ ಸಬಲೀಕರಣಗೊಳ್ಳಬೇಕೆಂದು ಸಂಘಟನೆ ಬಯಸುತ್ತದೆ. ಅವಕಾಶ ಇರುವ ಕಡೆಗಳೆಲ್ಲಾ ಇತರ ಸಮುದಾಯವನ್ನು ಸೇರಿಸಿಕೊಂಡು ಸಾಮಾಜಿಕ ಪರಿವರ್ತನೆಯ ವಿಚಾರದಲ್ಲಿ ದುಡಿಯುತ್ತಿದೆ.

ವೈವಿಧ್ಯತೆಯೇ ನಮ್ಮ ದೇಶದ ಜೀವಾಳ. ಋಷಿ ಮುನಿಗಳು, ಸೂಫಿ-ಶರಣರು ಶಾಂತಿ ಮಂತ್ರವನ್ನು ಹರಡಿದ ನಾಡಿದು. ಆ ಮೂಲಕ ಭ್ರಾತೃತ್ವ ಸಹಬಾಳ್ವೆಯನ್ನು ಸಾವಿರಾರು ವರ್ಷಗಳಿಂದ ಈ ದೇಶ ಉಳಿಸಿಕೊಂಡು ಬಂದಿದೆ. ಅದೇ ಈ ದೇಶದ ನಿಜವಾದ ಸಂಸ್ಕೃತಿ. ಆದರೆ ಫ್ಯಾಶಿಸ್ಟ್ ಶಕ್ತಿಗಳು ಕೋಮು ಧ್ರುವೀಕರಣದ ಮೂಲಕ ತಮ್ಮ ರಾಜಕೀಯ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅದಕ್ಕಾಗಿ ಇಲ್ಲಿ ಕೋಮು ಗಲಭೆ, ವಂಶ ಹತ್ಯೆಗಳನ್ನು ನಡೆಸುವುದು ಅವರ ಉದ್ದೇಶವಾಗಿದೆ. ಆದ್ದರಿಂದ ಈ ಮೇಲ್ಜಾತಿಯ, ಬಲಪಂಥೀಯ ಹುನ್ನಾರಗಳ ವಿರುದ್ಧ ದೇಶವಾಸಿಗಳನ್ನು ಎಚ್ಚರಿಸಿ ಸೌಹಾರ್ದತೆಯನ್ನು ಬೆಳೆಸಲು ನಮ್ಮ ಸಂಘಟನೆಯು ನಿರಂತರವಾಗಿ ಪ್ರಯತ್ನಿಸುತ್ತದೆ.

6. ಫ್ಯಾಶಿಸ್ಟ್ ವಿರುದ್ಧದ ಹೋರಾಟದ ಸಂಘಟನೆಯ ನಿಲುವು ತುಂಬಾ ಆಕ್ರಮಣಕಾರಿಯಾಗಿರುತ್ತದೆ ಎಂಬ ವಿಚಾರ ಕೇಳಿಬರುತ್ತಿದೆ. ಈ ಬಗ್ಗೆ ಏನು ಹೇಳುವಿರಿ ?

ಆರೆಸ್ಸೆಸ್ ಅನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಜಾತ್ಯತೀತ ಪಕ್ಷಗಳು, ಸಂಘ ಸಂಸ್ಥೆಗಳು ಸಂಪೂರ್ಣ ವಿಫಲವಾಗಿವೆ. ಆದರೆ ಆರೆಸ್ಸೆಸ್‌ ನ ಜೀವವಿರೋಧಿ ಸಿದ್ಧಾಂತಗಳು ಒಟ್ಟು ದೇಶಕ್ಕೆ ಅಪಾಯಕಾರಿ ಎಂಬ ಕಟುವಾಸ್ತವವನ್ನು ನಮ್ಮ ಸಂಘಟನೆಯು ಪ್ರಾರಂಭದಿಂದಲೇ ಹೇಳುತ್ತಾ ಬಂದಿದೆ. ಕೋಮುಗಲಭೆ, ಬಾಂಬ್ ಸ್ಫೋಟ ಮುಂತಾದ ಘಟನೆಗಳಲ್ಲಿ ಆರೆಸ್ಸೆಸ್ ಪಾತ್ರ ಬಹಿರಂಗವಾದಾಗ ಸಂಘಟನೆಯು ಅದನ್ನು ಗಟ್ಟಿ ಧ್ವನಿಯಲ್ಲಿ ದೇಶದ ಜನತೆಗೆ ತಿಳಿಸಿತು. ಆರೆಸ್ಸೆಸ್‌ ನ ಕೋಮುವಾದದ ವಿರುದ್ಧ ರಾಜಿರಹಿತ ನಿಲುವನ್ನು ಮುಂದುವರಿಸಿತು. ಬಾಬರಿ ಮಸ್ಜಿದ್ ಬಿಟ್ಟು ಕೊಟ್ಟರೆ ಇಲ್ಲಿ ಶಾಂತಿ ನೆಲೆಸಲಿದೆ ಎಂಬ ಟೊಳ್ಳು ವಾದವನ್ನು ಕೆಲವೊಂದು ಹಿತಾಸಕ್ತಿಗಳು ಪ್ರಚಾರಪಡಿಸಿದಾಗ ಮತ್ತು ತಥಾಕಥಿತ ಜಾತ್ಯತೀತ ಪಕ್ಷಗಳು ಬಾಬರಿ ಧ್ವಂಸದ ಬಗ್ಗೆ ಮೌನಕ್ಕೆ ಶರಣಾದಾಗ ಪಾಪ್ಯುಲರ್ ಫ್ರಂಟ್ ಮಾತ್ರ ಬಾಬರಿ ಮಸ್ಜಿದ್ ಪುನರ್ ನಿರ್ಮಾಣದ ತನ್ನ ನಿಲುವಿನಲ್ಲಿ ಅಚಲವಾಗಿತ್ತು. ಮಾತ್ರವಲ್ಲ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ವೇಳೆಯಲ್ಲೂ ಅದನ್ನು ಅನ್ಯಾಯದ ತೀರ್ಪೆಂದು ಘಂಟಾಘೋಷವಾಗಿ ಹೇಳಿತು. ಇದೀಗ ಕಾಶಿ ಮಸ್ಜಿದ್ ವಿಚಾರದಲ್ಲಿ ಬಿಜೆಪಿ ರಾಜಕೀಯ ನಡೆಸಲು ಪ್ರಾರಂಭಿಸಿದಾಗ ಬಾಬರಿ ಮಸ್ಜಿದ್ ವಿಚಾರದಲ್ಲಿ ಸಂಘಟನೆಯ ನಿಲುವು ಸರಿಯಾಗಿತ್ತು ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ತಂದ ಎನ್‌ ಆರ್‌ ಸಿ ಕಾಯ್ದೆಯನ್ನು ಬಹಿಷ್ಕರಿಸಲು ಮೊದಲು ಕರೆ ನೀಡಿದ ಸಂಘಟನೆ ಪಾಪ್ಯುಲರ್ ಫ್ರಂಟ್ ಆಗಿತ್ತು ಎಂಬುದು ಇಲ್ಲಿ ಗಮನಾರ್ಹ. ಈ ರೀತಿ ಹಲವು ವಿಚಾರಗಳಲ್ಲಿ ಸಂಘಟನೆಯು ತನ್ನ ದಿಟ್ಟ ನಿಲುವುಗಳನ್ನು ತೋರ್ಪಡಿಸುತ್ತಾ ಬಂದಿದೆ. ಸಹಜವಾಗಿ ಅದು ಆಕ್ರಮಣಕಾರಿ ನಿಲುವುಗಳಂತೆ ಕಂಡುಬಂದಿರಬಹುದು. ಆದರೆ ಅವೆಲ್ಲವೂ ದೇಶ ಮತ್ತು ಇಲ್ಲಿನ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೈಗೊಳ್ಳಲಾದ ಕ್ರಾಂತಿಕಾರಿ ನಿರ್ಧಾರಗಳಾಗಿದ್ದವು. ಅಕ್ರಮಿಯಾದ ರಾಜನ ಮುಂದೆ ಸತ್ಯವನ್ನು ಹೇಳುವುದು ಅತ್ಯಂತ ದೊಡ್ಡ ಹೋರಾಟ ಎಂಬ ಪ್ರವಾದಿ ವಚನವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

7. ದೇಶದಲ್ಲಿ ಮುಸ್ಲಿಮರು-ದಲಿತರ ಮೇಲಿನ ದೌರ್ಜನ್ಯ ಮತ್ತು ಅವರ ಹಿಂದುಳಿವಿಕೆಗೆ ಕಾರಣಗಳೇನು?

ಶೇಕಡಾ 25ರಷ್ಟಿರುವ ದಲಿತರು ಮತ್ತು ಶೇ.14.2 ರಷ್ಟಿರುವ ಮುಸ್ಲಿಮರು ಒಂದೇ ವೇಳೆ ಅತ್ಯಂತ ಕ್ರೂರ ದೌರ್ಜನ್ಯಕ್ಕೊಳಗಾಗುವ ಎರಡು ಸಮುದಾಯಗಳಾಗಿವೆ. ಇದಕ್ಕಿರುವ ಅತ್ಯಂತ ಪ್ರಮುಖ ಕಾರಣ, ಬಡತನ ಮತ್ತು ಅನಕ್ಷರತೆ. ಇವೆರಡರ ಮಧ್ಯೆ ಅಂತರ್ಲೀನವಾದ ಸಂಬಂಧವಿದೆ. ಅಂದರೆ ಬಡತನಕ್ಕೆ ಅನಕ್ಷರತೆ ಕಾರಣವಾದರೆ, ಅನಕ್ಷರತೆಗೆ ಬಡತನ ಕಾರಣವಾಗಿದೆ. ವಿಚಿತ್ರವೆಂದರೆ, ಈ ಎರಡೂ ಸಮುದಾಯಗಳಿಗೆ, ತಾವು ದಮನಕ್ಕೊಳಗಾಗುತ್ತಿರುವ ಮೂಲ ಕಾರಣವನ್ನು ಹುಡುಕಲು ಸಾಧ್ಯವಾಗಿಲ್ಲ. ಉದಾಹರಣೆಗೆ ಕೆಲವೊಂದು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ದಲಿತರನ್ನು ಎತ್ತಿ ಕಟ್ಟಲಾಗುತ್ತಿದೆ. ಇನ್ನು ಕೆಲವೆಡೆ ಶೂದ್ರರನ್ನು ಎತ್ತಿಕಟ್ಟಲಾಗುತ್ತದೆ. ಸಹಜವಾಗಿ ಇಂತಹ ಸಂದರ್ಭಗಳಲ್ಲಿ ದಲಿತ, ಶೂದ್ರ ವರ್ಗಗಳು ಮುಸ್ಲಿಮರು ತಮ್ಮ ಶತ್ರುಗಳೆಂದು ತಪ್ಪಾಗಿ ಭಾವಿಸಿಕೊಳ್ಳುತ್ತವೆ. ಕಳೆದ 70 ವರ್ಷಗಳಲ್ಲೂ ಇದೇ ವಿಚಾರವನ್ನು ನಂಬಿಸುತ್ತಾ ಬರಲಾಗಿದೆ. ಈ ಮೂಲಕ ಮೇಲ್ಜಾತಿಯವರು ತಮ್ಮ ಸಂಪತ್ತು, ಅಧಿಕಾರ ಮತ್ತು ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಈ ಮಧ್ಯೆ ಕಳೆದ ಎರಡು ದಶಕಗಳಲ್ಲಿ ದಲಿತ-ಶೂದ್ರ ಮತ್ತಿತರ ಕೆಳ ಜಾತಿ, ವರ್ಗಗಳು ಮುಸ್ಲಿಮರು ತಮ್ಮ ಶತ್ರುಗಳಲ್ಲ ಎಂಬ ಸತ್ಯವನ್ನು ಅರಿಯುವ ಅಲ್ಪಮಟ್ಟಿನ ಬೆಳವಣಿಗೆಗಳು ಕಂಡುಬಂದಿವೆ ಮತ್ತು ತಮ್ಮ ಹಿಂದುಳಿಯುವಿಕೆಯ ವಾಸ್ತವವನ್ನು ಅವರು ಸ್ವಯಂ ಅರಿತುಕೊಂಡಿದ್ದಾರೆ. ಆದರೂ ಮುಸ್ಲಿಮ್-ದಲಿತ ಸಮುದಾಯಗಳು ಪರಸ್ಪರ ಕೈಜೋಡಿಸಿಕೊಂಡು ತಮ್ಮ ಏಳಿಗೆಗಾಗಿ ಶ್ರಮಿಸಬೇಕಾಗಿರುವುದು ಈ ಹೊತ್ತಿನ ಅನಿವಾರ್ಯವಾಗಿದೆ.

8. ರೈತರ ಐತಿಹಾಸಿಕ ಆಂದೋಲನದ ಕುರಿತು ಏನು ಹೇಳ ಬಯಸುತ್ತೀರಿ?

ಪ್ರಸಕ್ತ ಬಿಜೆಪಿ ಸರ್ಕಾರದ ನೀತಿಗಳು ನಖಶಿಖಾಂತ ಕಾರ್ಪೊರೇಟ್ ಬಂಡವಾಳಶಾಹಿ ಪರವಾಗಿವೆ. ಇಲ್ಲಿ ರೈತರು, ಜನಸಾಮಾನ್ಯರ ಪರವಾಗಿ ಯಾವುದೇ ನೀತಿಗಳನ್ನು ರೂಪಿಸಲಾಗುತ್ತಿಲ್ಲ. ಫ್ಯಾಶಿಸ್ಟ್ ಶಕ್ತಿಗಳು ಕಾರ್ಪೊರೇಟ್ ಕುಳಗಳಿಗೆ ಲಾಭ ತಂದುಕೊಡುವ ಉದ್ದೇಶವನ್ನು ಮಾತ್ರ ಹೊಂದಿವೆ. ಒಂದು ರೀತಿಯಲ್ಲಿ ನೋಡುವುದಾದರೆ, ಈಗಿನ ಸರ್ಕಾರ ಮತ್ತು ಕ್ರೋನಿ ಬಂಡವಾಳಶಾಹಿಗಳ ಮಧ್ಯೆ ಕೊಡು-ಕೊಳ್ಳುವಿಕೆ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಹಣದ ಹೊಳೆ ಹರಿಸಲು ನೆರವಾಗುವ ಬಂಡವಾಳಶಾಹಿಗಳು ಚುನಾವಣೆಯ ನಂತರ ಅಧಿಕಾರಕ್ಕೇರುವ ಸರ್ಕಾರಗಳ ಮೇಲೆ ಪ್ರಭಾವ ಬೀರಿ ತಮ್ಮ ಪರವಾದ ನೀತಿಗಳನ್ನು ರೂಪಿಸಿಕೊಳ್ಳುತ್ತವೆ. ಇತ್ತೀಚಿನ ಮೂರು ಕೃಷಿ ಕಾಯ್ದೆಗಳು ರೈತರ ಭೂಮಿಯನ್ನು ಕಾರ್ಪೊರೇಟ್ ಕುಳಗಳಿಗೆ ಪಾದಬುಡಕ್ಕೆ ಅರ್ಪಿಸಿ ಅವುಗಳಿಗೆ ಲಾಭ ತಂದುಕೊಡುವ ಮೂಲ ಉದ್ದೇಶವನ್ನಷ್ಟೇ ಹೊಂದಿವೆ. ಈ ಕಾರಣದಿಂದ ಚಳಿ, ಬಿಸಿಲನ್ನು ಲೆಕ್ಕಿಸದೆ ರೈತಾಪಿ ವರ್ಗವು ಹೋರಾಟದಲ್ಲಿ ತೊಡಗಿದ್ದರೂ ಬಿಜೆಪಿ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದಾಗ್ಯೂ ಎಲ್ಲಾ ಕ್ಷೇತ್ರಗಳಲ್ಲೂ ಫ್ಯಾಶಿಸ್ಟ್ ಶಕ್ತಿಗಳು ಮೇಲುಗೈ ಸಾಧಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯ ಮಧ್ಯೆಯೂ ಈಗ ನಡೆಯುತ್ತಿರುವ ರೈತರ ಛಲ ಬಿಡದ ಐತಿಹಾಸಿಕ ಆಂದೋಲನ ಹಾಗೂ ಈ ಹಿಂದೆ ನಡೆದ ಎನ್‌ ಆರ್‌ ಸಿ ವಿರುದ್ಧದ ಹೋರಾಟವು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದೆ.

9. ಸರಕಾರ ಪೌರತ್ವ ಕಾನೂನನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತಂದರೆ, ಅದರ ವಿರುದ್ಧ ಯಾವ ರೀತಿಯ ಹೋರಾಟವನ್ನು ಸಂಘಟಿಸುವಿರಿ?

ಪೌರತ್ವ ತಿದ್ದುಪಡಿ ಕಾಯ್ದೆಯು ಅಸಾಂವಿಧಾನಿಕವೂ, ಅಮಾನವೀಯವೂ ಆಗಿದೆ. ನೂರಾರು ವರ್ಷಗಳಿಂದ ಬದುಕಿ ಬಾಳುತ್ತಿರುವ ಪೌರರನ್ನು ಅನ್ಯಾಯದ ಮೂಲಕ ಅವರ ಪೌರತ್ವವನ್ನು ಏಕಾಏಕಿ ಕಿತ್ತುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಜಗತ್ತಿನ ರಾಷ್ಟ್ರಗಳು ಇಂದು ಪೌರತ್ವವನ್ನು ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ವೇಳೆ ನಮ್ಮ ದೇಶದಲ್ಲಿ ಸ್ವದೇಶೀಯರನ್ನೇ ಪರದೇಶಿಗಳನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಮುಸ್ಲಿಮರ ಸಮಸ್ಯೆಯಲ್ಲ. ಇಂದು ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವವರು ನಾಳೆ ದಲಿತ, ಹಿಂದುಳಿದ ವರ್ಗಗಳ ಪೌರತ್ವವನ್ನು ಕಿತ್ತುಕೊಳ್ಳುತ್ತಾರೆ. ಕೊನೆಗೆ ಇಲ್ಲಿ ಮೇಲ್ಜಾತಿಯವರು ಮಾತ್ರವೇ ಪೌರರಾಗಿ ಬಾಕಿ ಉಳಿದವರು ಗುಲಾಮರಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಗುಪ್ತ ಯೋಜನೆ ಈ ಪೌರತ್ವ ತಿದ್ದುಪಡಿ ಕಾಯ್ದೆಯ ಹಿಂದಿದೆ. ಇದರ ವಿರುದ್ಧ ಎಲ್ಲಾ ಶಕ್ತಿಯನ್ನು ಬಳಸಿ ಸಂಘಟನೆ ಹೋರಾಟ ನಡೆಸಲಿದೆ.

10. ಜಾತಿ ಧರ್ಮದ ಅನುಪಾತವನ್ನು ಗಮನಿಸಿದರೆ ದೇಶದಲ್ಲಿ ಅಧಿಕಾರ ಹಂಚಿಕೆ ಅಸಮರ್ಪಕವಾಗಿದೆ ಎಂದನಿಸುತ್ತಿಲ್ಲವೇ?

ದೇಶದಲ್ಲಿ ಜಾತಿ ಧರ್ಮಗಳ ಅನುಪಾತ ಗಮನಿಸಿದರೆ ಅಧಿಕಾರ ಹಂಚಿಕೆಯಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದೆ. ಶೇಕಡಾ 5ರಷ್ಟು ಜನರಲ್ಲಿ ದೇಶದ ಶೇಕಡಾ 90ರಷ್ಟು ಸಂಪತ್ತು ಕ್ರೋಢೀಕರಣಗೊಂಡಿದೆ. ಶ್ರೀಮಂತರು ಮತ್ತು ಬಡವರ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಮುಸ್ಲಿಮರಲ್ಲಿ ಶೇಕಡಾ 35ರಷ್ಟು ಮಂದಿ ಭೂರಹಿತರು. ಶೇಕಡಾ 43ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇದೇ ವೇಳೆ ಹಿಂದೂಗಳು ಶೇ.32ರಷ್ಟು, ಪರಿಶಿಷ್ಟ ಜಾತಿ-ಪಂಗಡದ ಶೇಕಡಾ 50ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಶೇ.51.2ರಷ್ಟು ಮುಸ್ಲಿಂ ಕುಟುಂಬಗಳಿಗೆ ಕೃಷಿ ಭೂಮಿ ಇಲ್ಲ. ಸ್ಥಿರ ವರಮಾನ ಇರುವ ಮುಸ್ಲಿಮರು ಶೇ.27.3 ರಷ್ಟು ಮಾತ್ರ. ಪ್ರತಿ ತಿಂಗಳು 300 ರೂಪಾಯಿಗಿಂತ ಕಡಿಮೆ ಖರ್ಚು ಮಾಡುವವರಲ್ಲಿ ಶೇ.29 ರಷ್ಟು ಮುಸ್ಲಿಮರು, ಶೇ.26 ರಷ್ಟು ಹಿಂದೂಗಳು, ಶೇ.19 ರಷ್ಟು ಕ್ರೈಸ್ತರು ಇದ್ದಾರೆ.

ಭಾರತದಲ್ಲಿ ಪುರುಷರ ಒಟ್ಟು ಸಾಕ್ಷರತೆ ಶೇ.54.5 ರಷ್ಟಿದೆ. ಮುಸ್ಲಿಮರಲ್ಲಿ ಇದು ಶೇ.55ರಷ್ಟು, ಮುಸ್ಲಿಮ್ ಮಹಿಳೆಯರ ಸಾಕ್ಷರತೆ ಶೇ.41 ರಷ್ಟಿದೆ. ಅರ್ಧದಲ್ಲಿ ಶಾಲೆ ತೊರೆಯುವವರ ಸಂಖ್ಯೆ ಇತರ ಸಮುದಾಯಗಳಿಗಿಂತ ಮುಸ್ಲಿಮರಲ್ಲಿ ಹೆಚ್ಚಿದೆ. ಲೋಕಸಭೆಯಲ್ಲಿಯೂ ಮುಸ್ಲಿಮರ ಪ್ರಾತಿನಿಧ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 18ನೇ ಲೋಕಸಭೆಯಲ್ಲಿ 27 ಮುಸ್ಲಿಮ್ ಅಭ್ಯರ್ಥಿಗಳು ಮಾತ್ರ ಸಂಸದರಾಗಿ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ಒಟ್ಟು ಶೇಕಡಾ 15ರಷ್ಟು ಮುಸ್ಲಿಮ್ ಜನಸಂಖ್ಯೆ ಇದ್ದು ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಶೇ.4 ರಷ್ಟು ಮಾತ್ರವಿದೆ. ಬಿಜೆಪಿ ನೇತತ್ವದ ಸರ್ಕಾರಗಳು ಮುಸ್ಲಿಮರ ಸೌಲಭ್ಯಗಳಿಗೆ ಕತ್ತರಿ ಹಾಕುವ ಪ್ರವತ್ತಿ ಅನುಸರಿಸಿಕೊಂಡು ಬರುತ್ತಿವೆ. ಇದರಿಂದ ಅಧಿಕಾರ ಹಂಚಿಕೆಯಲ್ಲಿ ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ಮುಸ್ಲಿಮರಿಗೆ ಭಾರೀ ಅನ್ಯಾಯವಾಗುತ್ತಿರುವುದು ಸ್ಪಷ್ಟ.

11. ದೇಶದಲ್ಲಿ ಸೃಷ್ಟಿಯಾಗಿರುವ ಪ್ರಸಕ್ತ ಸಮಸ್ಯೆಗಳ ವಿರುದ್ಧ ಜನರು ಯಾವ ರೀತಿಯ ಹೋರಾಟ ನಡೆಸಬೇಕೆಂದು ಬಯಸುತ್ತೀರಿ?

 ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರ ತಂಡವು ಈ ದೇಶಕ್ಕೆ ಸಮಗ್ರವಾದ ಸಂವಿಧಾನವನ್ನು ನೀಡಿದೆ. ಕಟ್ಟ ಕಡೆಯ ಪ್ರಜೆಗೂ ಸ್ವಾತಂತ್ರ್ಯ, ಹಕ್ಕು, ಸಮಾನತೆ, ಘನತೆ, ಭದ್ರತೆ ದೊರೆಯಬೇಕೆಂಬುದು ನಮ್ಮ ಸಂವಿಧಾನದ ಆಶಯ ಮತ್ತು ಆಸ್ಮಿತೆಯಾಗಿದೆ. ಅದೇ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಅನ್ಯಾಯದ ವಿರುದ್ಧದ ಹೋರಾಟವನ್ನು ಪರಿಗಣಿಸಲಾಗಿದೆ. ಆದ್ದರಿಂದ ಈ ಸಂವಿಧಾನದ ಸ್ಫೂರ್ತಿಯೊಂದಿಗೆ ಹೋರಾಟವನ್ನು ನಡೆಸಿದರೆ ನಿಶ್ಚಿಯವಾಗಿಯೂ ಈ ದೇಶದ ಬಡವ, ದಮನಿತ, ದಲಿತ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಫ್ಯಾಶಿಸ್ಟ್ ಶಕ್ತಿಗಳಿಂದ ಸಂವಿಧಾನಕ್ಕೆ ಕಂಟಕ ಎದುರಾಗಿರುವ ಈ ಸನ್ನಿವೇಶದಲ್ಲಿ ಯಾವುದೇ ಬೆಲೆ ತೆತ್ತಾದರೂ ನಮ್ಮ ದೇಶದ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ಸಂವಿಧಾನದ ಮಾರ್ಗದರ್ಶನದಲ್ಲಿ ನಡೆಸುವ ಹೋರಾಟದ ಮೂಲಕ ದೇಶವನ್ನು ಮತ್ತು ನಾಗರಿಕರ ಹಿತಾಸಕ್ತಿಯನ್ನು ರಕ್ಷಿಸಬಹುದು ಎಂಬುದು ಪಾಪ್ಯುಲರ್ ಫ್ರಂಟ್‌ ನ ಬಲವಾದ ನಂಬಿಕೆಯಾಗಿದೆ.

Join Whatsapp