ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ರಹಿತ ಆಡಳಿತ ನೀಡುವುದೇ ನಮ್ಮ ಧ್ಯೇಯ: ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

ಮೈಸೂರು: ಕಳೆದ 75 ವರ್ಷಗಳಿಂದ ನಮ್ಮನ್ನು ಆಳುತ್ತಾ ಬಂದಿರುವ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತ ಹಾಗೂ ಜನ ವಿರೋಧಿ ನೀತಿಗಳನ್ನು ಹೇರುವ ಮೂಲಕ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿರುವುದನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷಗಳೂ ಸಹ ಕೋಮುವಾದಿ ಪಕ್ಷಗಳೊಂದಿಗೆ ಕೈಜೋಡಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಎಸ್.ಡಿ.ಪಿ.ಐ ಪಕ್ಷದ ಚಿಹ್ನೆಯಡಿಯಲ್ಲಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಗೆದ್ದಿರುವ ಚುನಾಯಿತ ಜನಪ್ರತಿನಿಧಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಅವರು ಕೋಮುವಾದಿ ಪಕ್ಷಗಳೊಂದಿಗೆ ಕೈ ಮಿಲಾಯಿಸಿ ಜಾತ್ಯತೀತ ಪಕ್ಷಗಳೆಂದು ಬಿಂಬಿಸುವ ಪಕ್ಷಗಳೂ ಅಲ್ಪಸಂಖ್ಯಾತರನ್ನು ವಂಚಿಸುತ್ತಲೇ ಬಂದಿವೆ. ಇನ್ನೊಂದೆಡೆ ಮನುವಾದವನ್ನು ಪರೋಕ್ಷವಾಗಿ ಪೋಷಿಸುತ್ತಾ ದಲಿತರನ್ನು ಶೋಷಣೆ ಮಾಡುತ್ತಲಿವೆ. ಈಗಿನ ನರೇಂದ್ರ ಮೋದಿ ನೇತೃತ್ವದ ಫಾಸಿಸ್ಟ್ ಸರ್ಕಾರದ ಮೂಲಕವಂತು ಅದು ಬಹಿರಂಗವಾಗೆ ನಡೆಯುತ್ತಿದ್ದು, ಅಲ್ಪಸಂಖ್ಯಾತರು; ಅದರಲ್ಲೂ ಮುಸ್ಲಿಮರು ದೇಶದಲ್ಲಿ ಭಯಭೀತ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಹೇಳಿದರು.

ದಲಿತರು ಮತ್ತೆ ಸಂವಿಧಾನಪೂರ್ವದ ಅಸ್ಪೃಶ್ಯತೆ ಕೂಪದಲ್ಲಿ ಸಿಲುಕಿಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಪರಿಸ್ಥಿತಿ ಯಾವ ಪ್ರತಿರೋಧ, ತಡೆ ಇಲ್ಲದೆ ಮುಂದುವರಿಯುತ್ತಿರುವುದು ಈ ದೇಶದ ದುರಂತವೇ ಸರಿ ಎಂದು ಹೇಳಿದರು. ಆದರೆ ನಮ್ಮ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಇದಕ್ಕೆಲ್ಲ ಅಪವಾದ ಎಂಬಂತೆ ಬಾಬಾ ಸಾಹೇಬರ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೊರಕಿರುವ ಅಲ್ಪಸ್ವಲ್ಪ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಜನಪರ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಮಜೀದ್ ಕರೆ ನೀಡಿದರು.

- Advertisement -

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಸಿ.ಶಂಕರ್ ಅವರು, ಮುನ್ಸಿಪಲ್ ಕಾಯಿದೆ ಮತ್ತು ಸ್ಥಳೀಯ ಸರ್ಕಾರದ ನೀತಿ ನಿಯಮಗಳ ಕುರಿತು ಉಪನ್ಯಾಸ ನೀಡಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಅವರು ‘ಯಶಸ್ವಿ ನಾಯಕನ ಗುಣಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ರಾಜ್ಯ ಸಮಿತಿ ಸದಸ್ಯರು ಹಾಗೂ ಚುನಾಯಿತ ಜನಪ್ರತಿನಿಧಿಗಳ ಉಸ್ತುವಾರಿಯಾದ ಅಬ್ದುಲ್ ಹನ್ನಾನ್ ಅವರು ಸ್ವಾಗತ ಭಾಷಣ ಮಾಡಿದರು. ಚುನಾಯಿತ ಪ್ರತಿನಿಧಿಗಳು ತಾವು ಮಾಡುವ ಕೆಲಸದ ಸಮಯದಲ್ಲಿ ಎದುರಾದ ಅಡೆತಡೆಗಳು, ಸವಾಲುಗಳು ಹಾಗೂ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು. ರಾಜ್ಯ ಕಾರ್ಯದರ್ಶಿ ಶಾಫೀ ಬೆಳ್ಳಾರೆ ಅವರಿಂದ ವಂದಣಾರ್ಪಣೆ ನೆರವೇರಿತು.



Join Whatsapp