ನವದೆಹಲಿ: ಮನೆಯವರ ವಿರೋಧವನ್ನು ಲೆಕ್ಕಿಸದೇ ಮದುವೆಯಾಗಿದ್ದ ಯುವಕನ ಮೇಲೆ, ಯುವತಿಯ ಮನೆಯವರು ಮಾರಣಾಂತಿಕ ಹಲ್ಲೆ ನಡೆಸಿ, ಆತನ ಜನನಾಂಗವನ್ನೇ ಕತ್ತರಿಸಿರುವ ಅಮಾನವೀಯ ಘಟನೆ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.
ಯುವ ಪ್ರೇಮಿಗಳ ನಡುವಿನ ಆಪ್ತ ಒಡನಾಟಕ್ಕೆ ಯುವತಿಯ ಮನೆಯಲ್ಲಿ ತೀವ್ರ ವಿರೋಧವಿತ್ತು. ಆದರೂ ಮನೆಯವರ ಕಣ್ತಪ್ಪಿಸಿ ಇಬ್ಬರೂ ದೆಹಲಿಯ ಹೊರಭಾಗದಲ್ಲಿ ವಿವಾಹವಾಗಿದ್ದರು ಕೆಲ ದಿನಗಳ ಬಳಿಕ ದೆಹಲಿಗೆ ಮರಳಿದ್ದ ನವಜೋಡಿ, ರಜೌರಿ ಪೊಲೀಸ್ ಠಾಣೆಗೆ ತೆರಳಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ತಮ್ಮ ಮಗಳು ಪೊಲೀಸ್ ಠಾಣೆಗೆ ಬಂದಿರುವ ವಿಚಾರ ತಿಳಿದ ಯುವತಿಯ ತಂದೆ ಹಾಗೂ ಕುಟುಂಬಸ್ಥರು ಅವರನ್ನು ನಡು ರಸ್ತೆಯಲ್ಲಿ ಅಡ್ಡಗಟ್ಟಿ ಯುವಕನನ್ನು ಎಳೆದಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಆತನ ಜನನಾಂಗವನ್ನೇ ಕತ್ತರಿಸಿ ಪರಾರಿಯಾಗಿದ್ದಾರೆ.
22 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ತಂದೆ ಹಾಗೂ ಇತರರ ವಿರುದ್ಧ ಕೊಲೆಯತ್ನ ಹಾಗೂ ಅಪಹರಣದ ಕೇಸು ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯ ಹೆಚ್ಚುವರಿ ಡಿಸಿಪಿ ಪ್ರಶಾಂತ್ ಗೌತಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ