ಅದಾನಿ ವಂಚನೆ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ: ಸಂಸತ್’ನಲ್ಲಿ ಕೋಲಾಹಲ, ಗದ್ದಲ

Prasthutha|

ನವದೆಹಲಿ: ಲೋಕ ಸಭೆ ಮತ್ತು ರಾಜ್ಯ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯು ಗದ್ದಲ, ಕೋಲಾಹಲಕ್ಕೆ ತಿರುಗಿದ ಪರಿಣಾಮ ಉಭಯ ಸದನಗಳನ್ನೂ ಮುಂದೂಡಿದ ಪ್ರಸಂಗ ನಡೆಯಿತು.

- Advertisement -

ರಾಜ್ಯ ಸಭೆ, ಲೋಕ ಸಭೆ ಎರಡರಲ್ಲೂ ಬಜೆಟ್ ಚರ್ಚೆಯ ನಡುವೆ ಪ್ರತಿಪಕ್ಷಗಳವರು ಅದಾನಿ ಗುಂಪಿನ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸಿ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಅಮೆರಿಕದ ಹಿಂಡನ್ ಬರ್ಗ್ ಸಂಸ್ಥೆಯು ಸಂಶೋಧನೆ ಮಾಡಿ, ಅದಾನಿ ಗುಂಪಿನ ವಂಚನೆ ಹೇಳಿರುವುದನ್ನು ಪ್ರತಿಪಕ್ಷಗಳವರು ಪ್ರಸ್ತಾಪಿಸಿದರು.

ಗುರುವಾರ ಅದಾನಿ ಗುಂಪಿನ ಷೇರುಗಳು 15% ಮುಳುಗಿದವು ಎಂದು ಕೂಡ ವರದಿಯಾಗಿದೆ. ಸಾರ್ವಜನಿಕರ ಹಣವಾದ ಎಲ್’ಐಸಿ ಮತ್ತು ಎಸ್’ಬಿಐ ಹಣಗಳು ಅದಾನಿ ಕಂಪೆನಿಯಲ್ಲಿ ಒಳ ಬಿದ್ದಿವೆ. ಆದ್ದರಿಂದ ಆ ಚರ್ಚೆಯೇ ಮುಖ್ಯ ಎಂದು ಪ್ರತಿಪಕ್ಷಗಳು ಅಡ್ಜರ್ನ್ ಮೆಂಟ್ ನೋಟಿಸ್ ನೀಡಿದವು.

- Advertisement -

ಲೋಕ ಸಭೆಯಲ್ಲಿ ಪ್ರತಿ ಪಕ್ಷಗಳವರು ಪ್ರಶ್ನೋತರ ಅವಧಿಯ ನಡುವೆ ಘೋಷಣೆಗಳನ್ನು ಕೂಗಿದರು. ರಾಜ್ಯ ಸಭೆಯಲ್ಲಿ ಇದೇ ಸ್ಥಿತಿಗೆ ಯಾವುದೇ ಅಡ್ಜರ್ನ್ ಮೆಂಟ್ ನೋಟೀಸು 267ನೇ ನಿಯಮದ ಅನುಸಾರ ಇಲ್ಲವಾದುದರಿಂದ ಸ್ವೀಕಾರಾರ್ಹವಲ್ಲ ಎಂದು ಸಭಾಪತಿ ಜಗದೀಪ್ ದನ್ಕರ್ ನಿರಾಕರಿಸಿದರು. ಅದಕ್ಕೆ ಪ್ರತಿಪಕ್ಷಗಳವರ ಕೂಗು ಉತ್ತರವಾದಾಗ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ನಿನ್ನೆ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಇಂದು ಚರ್ಚೆ ನಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

Join Whatsapp