ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ: ವಿಪಕ್ಷ ನಾಯಕ ಸಿದ್ದರಾಮಯ್ಯ

Prasthutha|

ಮೈಸೂರು: ಆಪರೇಷನ್‌ ಕಮಲ ಎಂಬುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಮಹಾರಾಷ್ಟ್ರದಲ್ಲಿ 40 ಜನ ಶಾಸಕರನ್ನು ಆಪರೇಷನ್‌ ಕಮಲದ ಮೂಲಕ ದುಡ್ಡುಕೊಟ್ಟು ಕೊಂಡುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ ಎಂದು ವಿಪಕ್ಷ ಮುಖಂಡ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಪರೇಷನ್‌ ಕಮಲ ಹುಟ್ಟಿದ್ದು ಬಿಜೆಪಿಯವರಿಂದ. 2008 ರಲ್ಲಿ ಯಡಿಯೂರಪ್ಪ ಇದನ್ನು ಆರಂಭ ಮಾಡಿದರು. ಇದೀಗ ಎಲ್ಲ ಕಡೆ ರೋಗದಂತೆ ಹಬ್ಬುತ್ತಿದೆ. ಇದೊಂದು ರಾಜಕೀಯ ರೋಗ, ಇದಕ್ಕೆ ಯಾರೂ ಪ್ರೋತ್ಸಾಹ ನೀಡಬಾರದು. ಯಾರೋ ಕೆಲವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಿದರೆ ಸರಿ, ಆದರೆ ಈ ರೀತಿ ಶಾಸಕರನ್ನು ದುಡ್ಡುಕೊಟ್ಟು ಕೊಂಡುಕೊಳ್ಳುವುದು ಸರಿಯಲ್ಲ. ಇದು ಗುಜರಾತ್‌, ಮಧ್ಯಪ್ರದೇಶ ದಲ್ಲಿ ನಡೆದಿದೆ, ರಾಜಸ್ತಾನದಲ್ಲಿ ಈಗಲೂ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಲ್ಲೂ ನಡೆದಿದೆ. ಇಂಥದಕ್ಕೆ ಯಾರೂ ಬೆಂಬಲ ನೀಡಬಾರದು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯೇ ಇಂಥದಕ್ಕೆ ಕುಮ್ಮಕ್ಕು ನೀಡುತ್ತಾರೆ ಎಂದರೆ ಪ್ರಜಾಪ್ರಭುತ್ವ ಉಳಿಯಲ್ಲ ಎಂದು ನುಡಿದಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಯವರಿಗೆ ಮಹಾರಾಷ್ಟ್ರದಲ್ಲಿ ಬಹುಮತ ಇದೆಯಾ? ಅವರು ಗೆದ್ದಿದ್ದು 104, ಇದರಲ್ಲೇ ಅಧಿಕಾರ ಹಿಡಿಯುತ್ತೀವಿ ಎಂದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶ ಇಲ್ಲ. 40 ಜನರ ಶಾಸಕರನ್ನು ದುಡ್ಡು ಕೊಟ್ಟು ಕೊಂಡುಕೊಳ್ತೀವಿ ಎಂದರೆ ಈ ಹಣ ಎಲ್ಲಿಂದ ಬಂದಿರಬೇಕು? ಒಬ್ಬೊಬ್ಬರಿಗೆ 25 ರಿಂದ 40 ಕೋಟಿ ಕೊಡ್ತಿದ್ದಾರೆ. ಭ್ರಷ್ಟಾಚಾರದ ಹಣವಲ್ಲವೇ ಇದು? ಭ್ರಷ್ಟಾಚಾರ ಮಾಡದೆ ಇಷ್ಟು ಹಣ ಎಲ್ಲಿಂದ ಬರುತ್ತೆ? ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಹಣವನ್ನು ಉಪಯೋಗಿಸಿ ಜನರ ತೀರ್ಪಿಗೆ ವಿರುದ್ಧವಾಗಿ ಸರ್ಕಾರಗಳನ್ನು ಬೀಳಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌, ಶಿವಸೇನೆ, ಎನ್.ಸಿ.ಪಿ ಸೇರಿ ಸರ್ಕಾರ ರಚನೆ ಮಾಡಿದ್ದಾವೆ, ಇವುಗಳಿಗೆ ಸಾಮಾನ್ಯ ಬಹುಮತ ಇದೆ ಹಾಗಾಗಿ 5 ವರ್ಷ ಆಡಳಿತ ಮಾಡಲು ಬಿಡಬೇಕಿತ್ತು. ಕರ್ನಾಟಕದಲ್ಲೂ ಇದನ್ನೇ ಮಾಡಿದ್ದು, ಈಗ ಮಹಾರಾಷ್ಟ್ರದಲ್ಲೂ ಇದನ್ನೇ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತರಬೇಕು. ನಾನು ಕೂಡ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯ ಮಾಡುತ್ತೇನೆ. ಒಂದು ಬಾರಿ ಗೆದ್ದವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುವಂತಿಲ್ಲ, ಒಂದು ವೇಳೆ ಗೆದ್ದ ಪಕ್ಷಕ್ಕೆ ರಾಜೀನಾಮೆ ನೀಡಿದ್ರೆ ಅವರು 10 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ನಿಯಮ ಬದಲಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 8 ವರ್ಷ ಆಯ್ತು, ಮೈಸೂರಿಗೆ ಏನೇನು ಮಾಡಿದ್ದಾರೆ ಎಂದು ಹೇಳಲಿ. ಡಬಲ್‌ ಇಂಜಿನ್‌ ಸರ್ಕಾರ ಏನು ಮಾಡಿದೆ? ಒಂದು ಪಟ್ಟಿ ಕೊಡಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಥಾಪಿಸಿದ್ದ ಮೈಸೂರು ಬ್ಯಾಂಕ್‌ ಇವತ್ತು ಇದೆಯಾ? ಹಾಜಿ ಅಬ್ದುಲ್ಲ ಸ್ಥಾಪನೆ ಮಾಡಿದ್ದ ಕಾರ್ಪೊರೇಷನ್‌ ಬ್ಯಾಂಕ್‌ ಈಗ ಇದೆಯಾ? ಸಿಂಡಿಕೇಟ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಇವೆಲ್ಲಾ ಇದೆಯಾ ಈಗ? ಇದೆನ್ನೆಲ್ಲಾ ವಿಲೀನ ಮಾಡಿದ್ದು ಯಾರು? ಇದು ಕನ್ನಡಿಗರಿಗೆ ಮಾಡಿದ ದ್ರೋಹ ಅಲ್ಲವೇ? ಈಗ ಈ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆಯಾ? 317 ಲಕ್ಷ ಕೋಟಿ ಈ ನಾಲ್ಕು ಬ್ಯಾಂಕುಗಳ ಒಟ್ಟು ಆಸ್ತಿ. 75.000 ಜನ ಕೆಲಸ ಮಾಡುತ್ತಿದ್ದರು. ಅದರಲ್ಲಿ ಬಹುತೇಕ ಕನ್ನಡಿಗರಿದ್ದರು. ಈಗ ಹೊಸದಾಗಿ ಕನ್ನಡಿಗರಿಗೆ ಕೆಲಸ ಕೊಡ್ತಾರ? ಇದು ಮೋದಿ ಅವರು ಕನ್ನಡಿಗರಿಗೆ ಮಾಡಿದ ದ್ರೋಹವಲ್ಲವೇ? ಎಂದು ಪ್ರಶ್ನಿಸಿದರು.

ಕೊರೊನಾ ಅಲೆ ವೇಳೆ ಮೋದಿ ಅವರು ಕರ್ನಾಟಕಕ್ಕೆ ಆಮ್ಲಜನಕ ಯಾಕೆ ಕೊಟ್ಟಿಲ್ಲ? ಹೈಕೋರ್ಟ್‌ ನವರು ಮಧ್ಯಪ್ರವೇಶಿಸಿ ಆಮ್ಲಜನಕ ಪೂರೈಸುವಂತೆ ಆದೇಶ ಕೊಟ್ಟರು, ಅದನ್ನು ಪ್ರಶ್ನಿಸಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆಹೋಯಿತು. ಚಾಮರಾಜನಗರದಲ್ಲಿ 36 ಜನ ಆಮ್ಲಜನಕ ಸಿಗದೆ ಸತ್ತರು, ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಜನ ಸತ್ತರು. ಇದಕ್ಕೆ ಹೊಣೆ ಯಾರು? ನರೇಂದ್ರ ಮೋದಿ ಅಲ್ಲವೇ? ಇದೇನಾ ಡಬ್ಬಲ್‌ ಇಂಜಿನ್‌ ಸರ್ಕಾರದ ಸಾಧನೆ? 2019ರಲ್ಲಿ, 2020 ರಲ್ಲಿ ಪ್ರವಾಹ ಬಂತು. ಆಗ ಜನರ ಕಷ್ಟ ಕೇಳೋಕೆ ಮೋದಿ ಅವರು ಬಂದಿದ್ರಾ? ಡಬ್ಬಲ್‌ ಇಂಜಿನ್‌ ಸರ್ಕಾರ ಅಂತಾರೆ, ಈ ಸರ್ಕಾರ ಜನರಿಗೆ ಏನು ಮಾಡಿದೆ ಹೇಳಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ನರೇಂದ್ರ ಮೋದಿ ಅವರಿಗೆ ಯಾವುದೇ ಮನವಿ ಕೊಟ್ಟರೂ ಅವರು ಅದನ್ನು ಜಾರಿ ಮಾಡಲ್ಲ ಎಂದು ರಾಜ್ಯ ಬಿಜೆಪಿಗೆ ಗೊತ್ತು ಅದಕ್ಕೆ ಸರ್ಕಾರ ಯಾವ ಮನವಿ ಕೊಟ್ಟಿಲ್ಲ. ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಮಾಡುತ್ತೇವೆ ಎಂದು ಮೈಸೂರಿಗೆ ಬಂದು ಬರೀ ಸುಳ್ಳು ಹೇಳಿ ಹೋಗಿದ್ದಾರೆ. ಮೈಸೂರಿಗೆ ಏನು ಮಾಡಿದ್ದೀವಿ, ಮುಂದೆ ಏನೇನು ಮಾಡ್ತೀವಿ ಎಂದು ಹೇಳಬೇಕು ಅಲ್ವಾ? ಪ್ರಧಾನಿಯಾಗಿ 8 ವರ್ಷ ಆಗಿದೆ, ಈ ಅವಧಿಯಲ್ಲಿ ಅವರಿಂದ ಮೈಸೂರಿಗೆ ಏನು ಕೆಲಸ ಆಗಿದೆ. ಬಿಜೆಪಿಯವರು ಹಳೇ ಮೈಸೂರು ಭಾಗವನ್ನು ಎಷ್ಟೇ ಗುರಿಯಾಗಿಟ್ಟುಕೊಂಡರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದರು.

ದ್ರೌಪದಿ ಮುರ್ಮನ ಅವರು ಬಿಜೆಪಿ ಕಾರ್ಯಕರ್ತೆ. ಮೊದಲು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು, ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿದ್ದವರು, ಒಮ್ಮೆ ರಾಜ್ಯಪಾಲರಾಗಿದ್ದರು. ಈಗ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಿದ್ದಾರೆ. ಇದರಲ್ಲಿ ವಿಶೇಷತೆಯಿಲ್ಲ. ಇಂಥವರನ್ನು ನಾಮಕಾವಸ್ತೆಗೆ ಕೂರಿಸಲು ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಡುತ್ತಾರೆ. ರಮಾನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ಏನು ಕೆಲಸ ಮಾಡಿದರು? ರಾಜೇಂದ್ರ ಪ್ರಸಾದ್‌ ಅಥವಾ ರಾಧಾಕೃಷ್ಣನ್‌ ಅವರ ಹಾಗೆ ಕೆಲಸ ಮಾಡಿದ್ರಾ? ಸಾಮಾಜಿಕ ನ್ಯಾಯ ಪಾಲನೆ ಮಾಡುವುದಾದರೆ ಈ ಹೆಣ್ಣುಮಗಳನ್ನು ಆರ್.ಎಸ್.ಎಸ್‌ ನ ಸರಸಂಘಚಾಲಕರನ್ನಾಗಿ ಮಾಡಲಿ. ಮೋಹನ್‌ ಭಾಗವತ್‌ ಬದಲಿಗೆ ಇವರಿನ್ನೇ ಮಾಡಲಿ ಎಂದು ಲೇವಡಿ ಮಾಡಿದರು.

2008ರಲ್ಲಿ ಮನಮೋಹನ್‌ ಸಿಂಗ್‌ ಅವರ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ತಂದಿತು. ಈಗಿನ ಸರ್ಕಾರಕ್ಕೆ ಬದ್ಧತೆ ಇಲ್ಲದಿರುವುದರಿಂದ ಜನರಿಗೆ ಈ ಹಕ್ಕು ಸಿಗುತ್ತಿಲ್ಲ. ದಲಿತರು, ಆದಿ ವಾಸಿಗಳು ಹಾಗೂ ಹಿಂದುಳಿದ ಜನರ ಪರವಾಗಿ ಬಿಜೆಪಿ ಯಾವತ್ತೂ ಇಲ್ಲ. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ ಇದೆ ಎಂದು ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ಬಂಧನವಾಗುತ್ತದೆ ಎಂದು ಭಯದಲ್ಲಿ ನಾವ್ಯಾರು ಇಲ್ಲ. ಮತ್ತೊಂದು ಪ್ರಮುಖ ಅಂಶವೆಂದರೆ ಇಲ್ಲಿ ನಿಜವಾದ ಮೊಕದ್ದಮೆಯೇ ಇಲ್ಲ, ಇದೊಂದು ಸುಳ್ಳು ಕೇಸ್. ಇದು ಹಳೇ ಕೇಸ್ ಅಂದಮೇಲೆ ಎಫ್‌ಐಆರ್ ಆಗಿರಬೇಕು, ಎಫ್ಐಆರ್‌ ಆಗಿದ್ದರೆ ಅದನ್ನು ಯಾಕೆ ಕೊಡುತ್ತಿಲ್ಲ? ಹಿಂದೆಯೇ ಇಡಿ ಯವರು ತನಿಖೆ ಮಾಡಿದ್ದನ್ನು ಮತ್ತೆ ಓಪನ್‌ ಮಾಡಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ವರ್ಚಸ್ಸು ಕುಗ್ಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇ.ಡಿ ಯನ್ನು ಎಲ್ಲರ ವಿರುದ್ಧ ಛೂ ಬಿಟ್ಟು ತಾವು ರಾಜಕೀಯವಾಗಿ ಬಲಿಷ್ಠರಾಗುತ್ತೇವೆ ಎಂದು ಬಿಜೆಪಿ ಭಾವಿಸಿದೆ, ಈ ದೇಶದ ಜನ ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಾಗಲೆಲ್ಲಾ ಆ ಸರ್ಕಾರದ ವಿರುದ್ಧ ನಿಂತಿದ್ದಾರೆ ಎಂದು ನಾವು ನೀವೆಲ್ಲಾ ನೆನಪಿಡಬೇಕು ಎಂದರು.

Join Whatsapp