ಸಾಹಿತಿಗಳು, ಸಮಾಜ ಸುಧಾರಕರಿಗೆ ಅವಮಾನ ಮಾಡಿದ ಚಕ್ರತೀರ್ಥಗೆ ಮಂಗಳೂರಿನಲ್ಲಿ ಪೌರ ಸನ್ಮಾನ: ವ್ಯಾಪಕ ಆಕ್ರೋಶ

Prasthutha: June 23, 2022

ಮಂಗಳೂರು: ಕನ್ನಡದ ಶ್ರೇಷ್ಠ ಸಾಹಿತಿಗಳು ಮತ್ತು ಸಮಾಜ ಸುಧಾರಕರಿಗೆ ಅವಮಾನ ಮಾಡಿ ನಾಡಿನ ಜನರ ಆಕ್ರೋಶಕ್ಕೆ ತುತ್ತಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ಮಂಗಳೂರಿನಲ್ಲಿ ಪೌರ ಸನ್ಮಾನ ಹಮ್ಮಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಚಿಂತನಾ ಗಂಗಾ ಎಂಬ ಸಂಘಟನೆ ಜೂನ್ 25ರಂದು ಕೆನರಾ ಹೈಸ್ಕೂಲ್ ನ ಭುವನೇಂದ್ರ ಸಭಾಂಗಣದಲ್ಲಿ ಚಕ್ರತೀರ್ಥಗೆ ನಾಗರಿಕ ಸನ್ಮಾನ ಹಮ್ಮಿಕೊಂಡಿದೆ. ಕರ್ನಾಟಕ ಗತವೈಭವ ಮತ್ತು ಅಳಿಸಿಹೋದ ಇತಿಹಾಸ ಎಂಬ ವಿಷಯದಲ್ಲಿ ರೋಹಿತ್ ಚಕ್ರತೀರ್ಥ ವಿಚಾರ ಮಂಡಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರಕವಿ ಕುವೆಂಪು, ನಾಡಪ್ರಭು ಕೆಂಪೇಗೌಡ ಅವರಿಗೆ ಅವಮಾನ ಮಾಡಿ, ಪಠ್ಯದಲ್ಲಿ ಕೋಮುವಾದವನ್ನು ತುರುಕಿದ ಹೀನ ಮನಸ್ಥಿತಿಯ ವ್ಯಕ್ತಿಗೆ ಬುದ್ಧಿವಂತರ ಜಿಲ್ಲೆಯಲ್ಲಿ ಸನ್ಮಾನ ಹಮ್ಮಿಕೊಂಡಿರುವುದು ನಾಚಿಕೆಗೇಡು ಎಂದು ಡಿವೈಎಫ್ ಐ ಕಿಡಿಕಾರಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ,
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾಡಿನ ಖ್ಯಾತನಾಮರು, ಮಹಾನ್ ಚೇತನಗಳಿಗೆ ಅವಮಾನ ಎಸಗಿರುವ, ನಾಡಗೀತೆಗೆ ಅಪಮಾನ ಎಸಗಿರುವ, ರಾಜ್ಯದಲ್ಲಿ ಸಾರ್ವತ್ರಿಕ ಆಕ್ರೋಶಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥ ಗೆ ಮಂಗಳೂರಿನ ಬಲಪಂಥೀಯ ವೇದಿಕೆಯೊಂದು ಶನಿವಾರ (ಜೂನ್ 25) ನಾಗರಿಕ ಸನ್ಮಾನ ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಆಘಾತವಾಯಿತು. ಇಡೀ ಕರ್ನಾಟಕ ಈ ವ್ಯಕ್ತಿಯ ವಿರುದ್ದ ಆಕ್ರೋಶಗೊಂಡಿರುವಾಗ, ಬಸವಣ್ಣ, ಕುವೆಂಪು, ನಾರಾಯಣ ಗುರುಗಳ ಅನುಯಾಯಿಗಳು ಪ್ರತಿಭಟನೆ ನಿರತರಾಗಿರುವ ಸಂದರ್ಭದಲ್ಲಿ ಮಂಗಳೂರಿನಂತಹ ವಿದ್ಯಾವಂತ ಜನರಿರುವ ನಗರದಲ್ಲಿ ಇದು ಘಟಿಸಬಾರದಿತ್ತು. ಅದರಲ್ಲಿಯೂ ನಾಗರಿಕ ಸನ್ಮಾನದ ಸಭಾಧ್ಯಕ್ಷತೆಯನ್ನು ಮಂಗಳೂರು ವಿ ವಿಯ ಕುಲಪತಿ ಯಡಪಡಿತ್ತಾಯರು ವಹಿಸಲಿರುವುದು ಕಂಡು ಮನಸ್ಸು ವಿಷಣ್ಣವಾಯಿತು. ಕುವೆಂಪು, ಅಂಬೇಡ್ಕರ್ ರಂತಹ ಮಹಾ ಚೇತನಗಳನ್ನು ಅವಮಾನಿಸುವ, ಅತ್ಯಂತ ಕೊಳಕು ಪದಗಳಿಂದ ನಾಡಿನ ಸಾಹಿತಿ ಬರಹಗಾರರನ್ನು ಟ್ರೋಲ್ ಮಾಡುವುದರಲ್ಲಿ ಕುಖ್ಯಾತಗೊಂಡಿರುವ ವ್ಯಕ್ತಿಯೊಬ್ಬನಿಗೆ ಸನ್ಮಾನ ಮಾಡುವ ಸಭೆಯ ಅಧ್ಯಕ್ಷತೆಯನ್ನು ವಿವಿಯ ಕುಲಪತಿಗಳು ವಹಿಸುತ್ತಾರೆ ಅಂತಾದರೆ ಕನಿಷ್ಠ ಪಕ್ಷ ಸಾರ್ವಜನಿಕ ಲಜ್ಜೆಯೂ ಈ ನಾಡಿನಲ್ಲಿ ಇಲ್ಲದಾಯಿತೇ ಎಂದು ಚಡಪಡಿಸುವಂತಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸರಿಯಲ್ಲ. ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇಡೀ ರಾಜ್ಯದಲ್ಲಿ ನಮ್ಮ ನಗರದ ಘನತೆಗೆ ಕುಂದು ತರುತ್ತದೆ.‌ ಆಯೋಜಕರು ಕಾರ್ಯಕ್ರಮ ಕೈ ಬಿಡಬೇಕು. ಕುಲಪತಿಗಳಾದ ಯಡಪಡಿತ್ತಾಯರಾದರು ಈ ಕಾರ್ಯಕ್ರದಲ್ಲಿ ನಾನಿಲ್ಲ ಎಂತ ಹೇಳಬೇಕು. ಅದಾಗಲಿಲ್ಲ ಅಂತಾದರೆ ಮಂಗಳೂರಿನ ಪ್ರಜ್ಞಾವಂತರು, ನಾಗರಿಕ ಸಂಘಟನೆಗಳು ಕಾರ್ಯಕ್ರಮದ ರದ್ದತಿಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!