‘ಆಪರೇಷನ್ ಗಂಗಾ’ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ನಾಗರಿಕರ ರಕ್ಷಣೆಯಲ್ಲಿ ಮೋದಿ ಸರಕಾರಕ್ಕೆ ಬದ್ಧತೆಯಿಲ್ಲ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಈಗ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ದೇಶದ ನಾಗರಿಕರ  ವಿಚಾರದಲ್ಲೂ ಉಡಾಫೆ ತೋರುತ್ತಿರುವುದು ಅಮಾನವೀಯ. ಸರಕಾರವೇ ಕೈ ಬಿಟ್ಟರೆ ಭಾರತೀಯರ ರಕ್ಷಣೆಗೆ ಯಾರಿದ್ದಾರೆ  ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

- Advertisement -

‘ಆಪರೇಷನ್ ಗಂಗಾ’ ಹೆಸರಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲಾಗುತ್ತಿದೆ ಎಂಬ ಕೇಂದ್ರ ಸರಕಾರದ ಹೇಳಿಕೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ. ಭಾರತೀಯರ ನೈಜಸ್ಥಿತಿಯನ್ನು ಅಲ್ಲಿರುವ ಭಾರತೀಯ ಪ್ರಜೆಯೊಬ್ಬರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ಕೋವಿಡ್-2ನೇ ಅಲೆಯಲ್ಲೂ ಪ್ರಜೆಗಳ ಪ್ರಾಣದ ಜೊತೆ ಕೇಂದ್ರ ಚೆಲ್ಲಾಟವಾಡಿತ್ತು. ಪ್ರಧಾನಿ ಮೋದಿಯವರೇ ಇದು ಕೈಕಟ್ಟಿ ಕೂರುವ ಸಮಯವಲ್ಲ. ಬಡಾಯಿ ಬಿಟ್ಟು ಭಾರತೀಯರ ರಕ್ಷಣೆಗೆ ಮುಂದಾಗಿ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಭಾರತೀಯರ ರಕ್ಷಣೆ ವಿದೇಶಾಂಗ ಇಲಾಖೆಯ ಜವಾಬ್ದಾರಿಯಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ವಿದೇಶ ಸುತ್ತಾಡುವುದೇ  ತಮ್ಮ ಕೆಲಸ ಎಂದು ಭಾವಿಸಿದಂತಿದೆ. ಉಕ್ರೇನ್‌ನಲ್ಲಿರುವ ಭಾರತೀಯರ ಸಾವಿನ ಸಂಖ್ಯೆ ಹೆಚ್ಚುವ  ಮೊದಲು  ವಿದೇಶಾಂಗ ಇಲಾಖೆ ನಿದ್ದೆಯಿಂದ ಎದ್ದೇಳಲಿ ಎಂದು ಟೀಕಿಸಿದ್ದಾರೆ.

Join Whatsapp