ಕುರಿಗಳಿಗೆ ಕನಿಷ್ಠ ಬೆಂಬಲ ನಿಗದಿಗೆ ಆನ್ ಲೈನ್ ಪೈಲಟ್ ಯೋಜನೆ ರಾಜ್ಯದಲ್ಲಿ ಜಾರಿ: ಧರ್ಮಪ್ಪ ದೊಡ್ಡಮನಿ

Prasthutha|

►ಪ್ರತಿ ಕುಟುಂಬದ ಎಲ್ಲಾ ಸದಸ್ಯರಿಗೆ ಒಂದು ಕುರಿ ನೀಡುವ ಯೋಜನೆ ಜಾರಿಗೆ ಚಿಂತನೆ

- Advertisement -

ಬೆಂಗಳೂರು: ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ ಸರ್ಕಾರ ಬೇರೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನಿಗದಿ ಮಾಡುವ ರೀತಿಯಲ್ಲಿ ಎಂಎಸ್ ಪಿ ನಿಗದಿ ಆನ್ ಲೈನ್ ವ್ಯವಸ್ಥೆಯ ಪೈಲಟ್ ಮಾದರಿಯ ಯೋಜನೆಯನ್ನು ರಾಜ್ಯದ ಆರು ಎಪಿಎಂಸಿ ಮಾರುಕಟ್ಟೆಗಳಲ್ಲಿ ಜಾರಿತರಲಾಗಿದೆ.

 ಈ ಪೈಲಟ್ ಯೋಜನೆ ಯಶಸ್ವಿಯಾದ ಬಳಿಕ ಇಡೀ ರಾಜ್ಯಾದ್ಯಂತ ಜಾರಿ ತರಲಾಗುವುದು ಎಂದು ನಿಗಮದ ನೂತನ ಅಧ್ಯಕ್ಷ ಧರ್ಮಪ್ಪ ದೊಡ್ಡಮನಿ ತಿಳಿಸಿದ್ದಾರೆ.

- Advertisement -

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದ ಆರು ಎಪಿಎಂಸಿ, ಎರಡು ರೈತ ಅಸೋಸಿಯೇಷನ್, ಮೂರು ಕುರಿಗಾರರ ಸಹಕಾರಿ ಸಂಘಗಳಲ್ಲಿ ಈ ಪೈಲಟ್ ಯೋಜನೆಯನ್ನು ಸದ್ಯ ಜಾರಿ ತರಲಾಗಿದೆ. ಈ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಪಶು ವೈದ್ಯಾಧಿಕಾರಿಗಳ ಸೇರಿದಂತೆ ಏಳು ಜನರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ತಿಂಗಳ 8 ದಿನಕ್ಕೊಮ್ಮೆ ಎಂಎಸ್ ಪಿ ದರವನ್ನು ನಿಗದಿ ಪಡಿಸಲಿದೆ. ರಾಜ್ಯದಲ್ಲಿ ಭತ್ತ, ರಾಗಿ, ಹತ್ತಿ, ಜೋಳ ಸೇರಿದಂತೆ ಬೇರೆ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ವ್ಯವಸ್ಥೆ ಪ್ರತಿವರ್ಷ ಇದೆ. ಆದರೆ ಕೃಷಿಯ ಭಾಗ ಬೆಳೆಯಾದ ಕುರಿ ಸಾಕಾಣಿಕೆಗೆ ಬೆಂಬಲ ಬೆಲೆ ನಿಗದಿ ಪಡಿಸುವ ವ್ಯವಸ್ಥೆ ಇರಲಿಲ್ಲ ಈ ಹಿನ್ನಲೆಯಲ್ಲಿ ನಿಗಮದಿಂದ ಈ ಯೋಜನೆಯನ್ನು ಜಾರಿ ತರಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಲೆಮಾರಿ ಕುರಿಗಾರರಿಗೆ ಸಾಕಷ್ಟು ತೊಂದರೆ ಇದ್ದು, ಸಾರ್ವಜನಿಕರಿಂದ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಮಲೆನಾಡು ಪ್ರದೇಶದಲ್ಲಿ ಅಲೆಮಾರಿ ಕುರಿಗಾರರಿಗೆ ತೊಂದರೆ ಇದ್ದು, ರಾಜ್ಯದಲ್ಲಿರುವ ಗೋಮಾಳ ಜಮೀನುಗಳನ್ನು ಕುರಿಗಳು ಮೇಯಲು ಮೀಸಲಿಡುವಂತೆ ರಾಜ್ಯ ಸರ್ಕಾರದ ಗಮನ ಸಳೆದು ಅಲೆಮಾರಿ ಕುರಿಗಾರರಿಗೆ ವಿಶೇಷ ಯೋಜನೆ ಜಾರಿ ತರುವ ಬಗ್ಗೆ ಗಂಬೀರ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಕುರಿ ಸಾಕಾಣಿಕೆ, ಉಣ್ಣೆ ಉದ್ಯಮ ದೊಡ್ಡ ಉದ್ಯಮವಾಗಿ ಬೆಳೆಯಲು ಅನುಕೂಲವಾಗುವಂತೆ ಕೆಲ ಪೂರಕ ಯೋಜನೆಗಳನ್ನು ಜಾರಿತರಲಾಗುವುದು. ಇದಕ್ಕಾಗಿ ಕೆಲ ತರಬೇತಿ, ಸಬ್ಸಿಡಿಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಆಂಧ್ರಪ್ರದೇಶ ಮಾದರಿಯಲ್ಲಿ ಪ್ರತಿ ಕುಟುಂಬದ ಎಲ್ಲ ಸದಸ್ಯರಿಗೆ ಒಂದು ಕುರಿಯನ್ನು ನೀಡುವ ವ್ಯವಸ್ಥೆಯನ್ನು ಜಾರಿ ತರುವ ಬಗ್ಗೆ ರಾಜ್ಯ ಸರ್ಕಾರದ ಗಮನ ಸಳೆದು ಮುಂದಿನ ಬಜೆಟ್ ನಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ತಮ್ಮಗೆ ಇರುವ ಅವಧಿಯಲ್ಲಿ ಕುರಿಗಾರರಿಗೆ ಅನುಕೂಲಕರ ವಾಗುವ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಸಬ್ಸಿಡಿ ದರದಲ್ಲಿ ಸಾಲ, ಅಗತ್ಯ ಪರಿಹಾರ, ಕುರಿಗಾರರಿಗೆ 5 ಲಕ್ಷದವರೆಗೆ ಸಾಲ ಸೌಲಭ್ಯ, ಶೆಡ್ ನಿರ್ಮಾಣಕ್ಕೆ ಅಗತ್ಯ ಸಹಾಯ ಧನ ಒದಗಿಸುವ ಬಗ್ಗೆ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

Join Whatsapp