ನವದೆಹಲಿ : ಇನ್ನು ಮುಂದೆ ಆನ್ ಲೈನ್ ಸುದ್ದಿ ಮಾಧ್ಯಮಗಳು, ನೆಟ್ ಫ್ಲಿಕ್ಸ್, ಅಮೆಝಾನ್ ಪ್ರೈಮ್ ವೀಡಿಯೊ ಮತ್ತು ಹಾಟ್ ಸ್ಟಾರ್ ನಂತಹ ಕಂಟೆಂಟ್ ಪ್ರೊವೈಡರ್ ಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ. ಈ ಸಂಬಂಧ ಕೇಂದ್ರ ಸರಕಾರ ಸುತ್ತೋಲೆಯೊಂದನ್ನು ಜಾರಿಗೊಳಿಸಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಹಿ ಮಾಡಿರುವ ಸುತ್ತೋಲೆಯಲ್ಲಿ, ಫೇಸ್ ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿನ ಸುದ್ದಿಗಳನ್ನೂ ಈ ಸಚಿವಾಲಯದ ಅಧೀನಕ್ಕೆ ತರಲಾಗಿದೆ.
ಆನ್ ಲೈನ್ ವೇದಿಕೆಗಳಲ್ಲಿ ಪ್ರಸಾರವಾಗುವ ಫಿಲಂಗಳು, ಆಡಿಯೊ-ವೀಡಿಯೊ, ಸುದ್ದಿಗಳು ಮತ್ತು ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆಯೂ ಸಚಿವಾಲಯದ ವ್ಯಾಪ್ತಿಗೊಳಪಡುತ್ತದೆ.
ಇಲ್ಲಿವರೆಗೆ ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ಸರಕಾರಿ ಸಂಸ್ಥೆ ಇರಲಿಲ್ಲ. ಹೀಗಾಗಿ ಡಿಜಿಟಲ್ ವಾಹಿನಿಗಳನ್ನು ಸುಲಭವಾಗಿ ತೆರೆದು ಜನರು ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದರು ಮತ್ತು ಪ್ರಸಾರ ಮಾಡುತ್ತಿದ್ದರು.
ಒಟಿಟಿ ವೇದಿಕೆಗಳನ್ನು ನಿಯಂತ್ರಿಸುವ ಸಂಸ್ಥೆ ಸ್ಥಾಪಿಸುವುದಕ್ಕೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯ ವೇಳೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಕೇಂದ್ರದ ಪ್ರತಿಕ್ರಿಯೆ ಕೋರಿತ್ತು.