ಎಸ್.ಡಿ.ಪಿ.ಐ ವಿರುದ್ಧ ಮಾನಹಾನಿಕಾರಿ ಹೇಳಿಕೆ: ಹರಿಕೃಷ್ಣ ಬಂಟ್ವಾಳ ವಿರುದ್ಧ ದೂರು ದಾಖಲು

Prasthutha|

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವಿರುದ್ಧ ಮಾನಹಾನಿಕಾರಿ ಆರೋಪವನ್ನು ಮಾಡಿದ ಹರಿಕೃಷ್ಣ ಬಂಟ್ವಾಳ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ಎಸ್.ಡಿ.ಪಿ.ಐಯ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯ ಮುಹಮ್ಮದ್ ಇದ್ರೀಸ್ ಎಂಬವರು ದೂರು ಸಲ್ಲಿಸಿದ್ದಾರೆ..

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಾ ಹರಿಕೃಷ್ಣರವರು ಬಂಟ್ವಾಳ ಪುರಸಭೆಯಲ್ಲಿ ಬೆಂಬಲವನ್ನು ನೀಡಲು ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರದ ನಾಯಕ ರಾಜೇಶ್ ನಾಯಕ್ ರೊಂದಿಗೆ ಹಣಕಾಸಿನ ಬೇಡಿಕೆಯನ್ನು ಇಟ್ಟಿತ್ತು. ರಾಜೇಶ್ ನಾಯಕ್ ಅದನ್ನು ನಿರಾಕರಿಸಿದಾಗ ಕಾಂಗ್ರೆಸ್ ಬಳಿ ಹೋಯಿತು ಎಂಬ ಗಂಭೀರ ಆರೋಪವನ್ನು ಮಾಡಿದ್ದರು.

- Advertisement -

ಇದ್ರೀಸ್ ಸಲ್ಲಿಸಿದ ದೂರಿನಲ್ಲಿ “ ಬಂಟ್ವಾಳ ತಾಲೂಕಿನ ಮೂಡಪಡುಕೋಡಿ ಮತ್ತು ಇರ್ವತ್ತೂರು ಗ್ರಾಮದ ರಮೇಶ ಕುಡಮೆ ಎಂಬವರ ಮನೆಯಲ್ಲಿ ನಡೆದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಹರಿಕೃಷ್ಣ ಬಂಟ್ವಾಳ ಎಂಬಾತ ಎಸ್.ಡಿ.ಪಿ.ಐ ಪಕ್ಷಕ್ಕೆ ಮುಜುಗರವುಂಟುಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡಿರುತ್ತಾನೆ. ಸುಮಾರು ಲಕ್ಷ ಹಣ ನೀಡುವುದಾದರೆ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತಹಾಕುವುದಾಗಿ ಎಸ್.ಡಿ.ಪಿ.ಐ ಕ್ಷೇತ್ರದ ಶಾಸಕರ ಮುಂದೆ ಬೇಡಿಕೆಯಿಟ್ಟಿತ್ತು ಎಂದು ಸುಳ್ಳಾರೋಪ ಮಾಡಿದ್ದಾನೆ” ಎಂದು ಉಲ್ಲೇಖಿಸಲಾಗಿದೆ.

“ಪಕ್ಷದ ಮೇಲೆ ಜನರಿಗಿರುವ ನಂಬಿಕೆ ಹೋಗುವಂತೆ ಮಾಡುವ ಮತ್ತು ಅವರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಯುಂಟುಮಾಡುವ ಉದ್ದೇಶದಿಂದ ಈ ರೀತಿಯ ಭಾಷಣ ಮಾಡಲಾಗಿದೆ. ಎಸ್.ಡಿ.ಪಿ.ಐ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವ ಒಂದು ಸಿದ್ಧಾಂತದ ತಳಹದಿಯ ಮೇಲೆ ನಿಂತಿರುವ ಪಕ್ಷವಾಗಿದೆ. ಇಂತಹ ಆರೋಪ ಪಕ್ಷಕ್ಕೆ ಕಪ್ಪು ಚುಕ್ಕೆಯುಂಟುಮಾಡಲಿದೆ. ಹರಿಕೃಷ್ಣ ಬಂಟ್ವಾಳ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು” ಎಂದು ದೂರುದಾರರು ಆಗ್ರಹಿಸಿದ್ದಾರೆ.

Join Whatsapp