ಟೋಲ್‌ ಕಟ್ಟುವ ಪ್ರತಿ ಪೈಸೆಗೂ ಒಂದು ಗುಂಡಿ ಗ್ಯಾರಂಟಿ: ಉಡುಪಿ ಮಂಗಳೂರು ಹೆದ್ದಾರಿ ಬಗ್ಗೆ ಮಾಜಿ ಸಚಿವರ ಮಗನ ಪೋಸ್ಟ್ ವೈರಲ್

Prasthutha|

ಉಡುಪಿ : ಉಡುಪಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66 ರ ಕಳಪೆ ಕಾಮಗಾರಿ ಕುರಿತಂತೆ  ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ದಿವಂಗತ ವಿ.ಎಸ್.ಆಚಾರ್ಯ ಅವರ ಪುತ್ರ ಹಾಕಿರುವ ಫೇಸ್ಬುಕ್ ಪೋಸ್ಟೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡುತ್ತಿದೆ.

- Advertisement -

ದಿವಗಂತ ವಿ.ಎಸ್. ಆಚಾರ್ಯರ ಪುತ್ರ ಡಾ.ಕಿರಣ್ ಆಚಾರ್ಯ ಅವರು ತಮ್ಮ ಫೇಸ್‌ಬುಕ್ ಪೋಸ್ಟ್ ನಲ್ಲಿ, ಉಡುಪಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆಯ ಬಗ್ಗೆ ಬರೆದುಕೊಂಡಿದ್ದು, ಟೋಲ್‌ ಕಟ್ಟಿಯೇ ಸಂಚರಿಸಬೇಕಾದ ಈ ಹೆದ್ದಾರಿಯಲ್ಲಿರುವ ಅಪಾಯಕಾರಿ ಗುಂಡಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವುಗಳು ದ್ವಿಚಕ್ರ ಚಾಲಕರ ಜೀವಕ್ಕೆ ಕುತ್ತು ತರಬಹುದೆಂದು ಎಚ್ಚರಿಸಿದ್ದಾರೆ.

‘ನೀವು ಟೋಲ್‌ ಕಟ್ಟುವ ಪ್ರತಿ ಪೈಸೆಗೂ ಒಂದು ಗುಂಡಿ ಗ್ಯಾರಂಟಿʼ ಎಂದು ಇಂಗ್ಲೀಷ್ ನಲ್ಲಿ ಬರೆದು ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾರೆ. ಸರಕಾರ ಜನರನ್ನು ಲಘುವಾಗಿ ಕಾಣುವುದರಿಂದ ಯಾವುದೇ ಅಧಿಕಾರಿ ಅಥವಾ ರಾಜಕಾರಣಿಯನ್ನು ಟ್ಯಾಗ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆಚಾರ್ಯ ಅವರು ಕಿಡಿಕಾರಿದ್ದಾರೆ.

- Advertisement -

ಆಚಾರ್ಯ ಅವರ ಪೋಸ್ಟ್‌ ನೆಟ್ಟಿಗರ ಗಮನ ಸೆಳೆದಿದ್ದು, ಈ  ವಿಷಯದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಪೋಸ್ಟ್ ನ ಕಮೆಂಟ್ ವಿಭಾಗದಲ್ಲಿ ಹಲವರು ಜನರ ಕುಂದು ಕೊರತೆಗಳು ಹಾಗೂ ಅದಕ್ಕೆ ಸರಕಾರದ ಸ್ಪಂದನೆಯ ಕೊರತೆ ಬಗ್ಗೆ ದನಿಯೆತ್ತಿದ್ದಾರೆ.

ಗ್ಲಾಡ್ಸನ್ ಅಲ್ಮೇಡಾ ರವರು ಕಿರಣ್ ಆಚಾರ್ಯರವರ ಪೋಸ್ಟ್ ಶೇರ್ ಮಾಡಿ ಈ ಕೆಳಗಿನಂತೆ ಬರೆದುಕೊಂಡಿದ್ದಾರೆ.  ಇವರು ನಮ್ಮ ಮಾಜಿ ಗೃಹಮಂತ್ರಿ ದಿವಂಗತ ಡಾ.ವಿ ಎಸ್‍ ಆಚಾರ್ಯರ ಮಗ. ಎರಡು ರೂಪಾಯಿಗಾಗಿ ತಮ್ಮನ್ನು ಹಾವಿನಪುರದ ಹಾವಾಡಿಗರ ಬ್ಲಡಿ ಬ್ಯಾಂಕ್ ನಲ್ಲಿ ಅಡವಿಟ್ಟಿರುವ ಸೀಳುನಾಯಿಗಳು ಶೀಘ್ರದಲ್ಲಿ ಇವರನ್ನೂ ದೇಶದ್ರೋಹಿಗಳ ಪಟ್ಟಿಗೆ ಸೇರಿಸಬಹುದು. ಯಾವ ಮಂತ್ರಿಗೆ ಟ್ಯಾಗ್ ಮಾಡಿದರೂ ಪ್ರಯೋಜನವಿಲ್ಲವೆಂದು ಮಾಜಿ ಗೃಹಮಂತ್ರಿಯ ಪುತ್ರರೇ ಹೇಳುತ್ತಿದ್ದಾರೆಂದರೆ ಸಾಮಾನ್ಯ ಜನರ ಗತಿಯೇನಾಗಬಹುದು? ಮಂಗಳೂರಿನ ಬೆಂಕಿ ಕುಮಾರ ಹಾಗೂ ಉಡುಪಿಯ ಕೂಗುಮಾರಿಗೆ ಹೆಣ ಬಿದ್ದರೆ ಟ್ಯಾಗ್ ಮಾಡಬಹುದೇ ವಿನ: ರಸ್ತೆ ಸರಿಯಿಲ್ಲ, ಚರಂಡಿ ಸರಿಯಿಲ್ಲ, ಶಾಲೆಯಿಲ್ಲ, ಸೇತುವೆ ಇಲ್ಲ, ಕೆಲಸ ಇಲ್ಲ, ಬೆಲೆ ಜಾಸ್ತಿಯಾಗಿದೆ, ತೆರಿಗೆ ಹೆಚ್ಚಾಗಿದೆಯೆಂದೆಲ್ಲಾ ಹೇಳುವಂತಿಲ್ಲ. ಮೈಮನವೆಲ್ಲಾ ಮುಸ್ಲಿಂ ದ್ವೇಷವನ್ನೇ ಉಸಿರಾಡುವ ಕರಾವಳಿಯ ಜನರು ಅನುಭವಿಸಬೇಕು. ಇಲ್ಲದಿದ್ದರೆ  ಬುದ್ದಿ ಬರುವುದಿಲ್ಲ  ಎಂದು ಹೇಳಿದ್ದಾರೆ.

ಸರಕಾರದ ವಿರುದ್ಧ ಮಾಜಿ ಗೃಹ ಮಂತ್ರಿಯ ಮಗ ಕಿಡಿಕಾರಿದ ಮೇಲಾದರೂ ಸರಕಾರ, ಸಂಸದರು, ಶಾಸಕರು ಆ ವಿಷಯದಲ್ಲಿ ಕ್ರಮ ಕೈಗೊಳ್ಳಬಹುದೇ ಎಂದು ಕಾದು ನೋಡಬೇಕಾಗಿದೆ.

Join Whatsapp