ಪತಿ-ಪತ್ನಿ ಜಗಳದಲ್ಲಿ ಅತ್ತೆ ಬಲಿ: ಅಳಿಯನ ಬಂಧನ

Prasthutha|

ಬೆಂಗಳೂರು: ಪತಿ-ಪತ್ನಿ ಜಗಳದಲ್ಲಿ ಅತ್ತೆ ಬಲಿಯಾಗಿರುವ ದಾರುಣ ಘಟನೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ನಡೆದಿದೆ.
ಸಂಜಯನಗರದ ಸೌಭಾಗ್ಯ ಕೊಲೆಯಾದವರು. ಕೃತ್ಯ ನಡೆಸಿದ ಆಕೆಯ ಅಳಿಯ ನಾಗರಾಜ (35)ನನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

- Advertisement -


ಕಳೆದ 6 ವರ್ಷಗಳ ಹಿಂದೆ ನಾಗರಾಜ ಹಾಗೂ ಕೊಲೆಯಾದ ಸೌಭಾಗ್ಯ ಅವರ ಪುತ್ರಿ ಭವ್ಯಶ್ರೀ ವಿವಾಹವಾಗಿದ್ದರು. ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಇದರಿಂದ ಮನನೊಂದು ಗಂಡನ ಕಾಟ ತಾಳಲಾರದೇ ಭವ್ಯ ಶ್ರೀ ಸಂಜಯನಗರದ ತನ್ನ ತಾಯಿ ಸೌಭಾಗ್ಯ ಅವರ ಮನೆಗೆ ಬಂದು ಅಲ್ಲೇ ಉಳಿದುಕೊಂಡಿದ್ದರು.


ಕಳೆದ ಮೂರು ವರ್ಷಗಳಿಂದ ತಾಯಿ ಮನೆಯಲ್ಲಿಯೇ ವಾಸವಾಗಿದ್ದ ಭವ್ಯ ಶ್ರೀ, ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ನಡೆಸುತ್ತಿದ್ದರು. ಈ ವಿಚಾರ ತಿಳಿದು ಮತ್ತೆ ಪತ್ನಿ ಬೇಕು ಎಂದು ಕುಡಿದ ಅಮಲಿನಲ್ಲಿ ನಾಗರಾಜ ಕಳೆದ ಜುಲೈ 12ರಂದು ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿ ಪತ್ನಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಸೌಭಾಗ್ಯ ಕುಟುಂಬಸ್ಥರು ಬುದ್ಧಿ ಹೇಳಿ ನಾಗರಾಜನನ್ನು ವಾಪಸ್ ಕಳುಹಿಸಿದ್ದರು. ಆದರೆ ಇದರಿಂದ ಕೋಪಗೊಂಡ ನಾಗರಾಜ, ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಪಣತೊಟ್ಟು ಅತ್ತೆ ಕೊಲೆಗೆ ಮುಂದಾಗಿದ್ದಾನೆ.

- Advertisement -


ಅದರಂತೆ ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಸೌಭಾಗ್ಯ ಅವರನ್ನು ಸೊಪ್ಪು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಜುಲೈ 13 ರಂದು ಬಂದು ನಾಗರಾಜ್ ಏಕಾಏಕಿ ಸುತ್ತಿಗೆಯಿಂದ ಐದಾರು ಬಾರಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಗಂಬೀರವಾಗಿ ಗಾಯಗೊಂಡ ಸೌಭಾಗ್ಯ ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ ಸಾವನ್ನಪ್ಪಿದ್ದಾರೆ.
ಕೃತ್ಯದ ಸಂಬಂಧಿಸಿದಂತೆ ಎಚ್ಎಎಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿ ನಾಗರಾಜ್ ಅನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ನನಗೆ ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿ ಕೊಲ್ಲುವುದಕ್ಕೆ ಸಂಚು ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಲ್ಲಿ ಯಾರು ಎನ್ನುವುದೇ ಗೊತ್ತಾಗಿಲ್ಲ. ಪತ್ನಿ ಎಂದು ಅತ್ತೆಗೆ ಹೊಡೆದುಬಿಟ್ಟೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

Join Whatsapp