ದಲಿತ ಹುಡುಗನಿಗೆ ಗಂಭೀರ ಹಲ್ಲೆ: ಕಾಲು ನೆಕ್ಕುವಂತೆ ಬಲವಂತ ಪಡಿಸುತ್ತಿರುವ ದೃಶ್ಯ ವೈರಲ್

Prasthutha|

ರಾಯ್ ಬರೇಲಿ: ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ತಾಯಿಯ ವೇತನ ಕೇಳಿದ ಕಾರಣಕ್ಕೆ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನೋರ್ವನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಬಳಿಕ ಕಾಲು ನೆಕ್ಕುವಂತೆ ಬಲವಂತ ಪಡಿಸಿದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.

- Advertisement -

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 2 ನಿಮಿಷ 30 ಸೆಕೆಂಡ್ ಅವಧಿಯ ಈ ವೈರಲ್ ವೀಡಿಯೋದಲ್ಲಿ, ಠಾಕೂರ್ ಸಮುದಾಯಕ್ಕೆ ಸೇರಿದ ಯುವಕನೋರ್ವ ಬೈಕ್ ನಲ್ಲಿ ಕುಳಿತಿದ್ದು,  ಸಂತ್ರಸ್ತ ದಲಿತ ಬಾಲಕನ ಕಿವಿಯನ್ನು ಹಿಡಿದು ನೆಲದ ಮೇಲೆ ಕುಳಿತು ಕಾಲು ನೆಕ್ಕುವಂತೆ ಬಲವಂತಪಡಿಸುತ್ತಿರುವ ಅಮಾನವೀಯ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಬಾಲಕ ಭಯದಿಂದ ನಡಗುತ್ತಿರುವುದನ್ನು ನೋಡಿ ಅಕ್ಕಪಕ್ಕದಲ್ಲಿರುವವರು ಜೋರಾಗಿ ನಗುವುದರ ಜೊತೆಗೆ, ʻಇಂತಹ ತಪ್ಪುಗಳನ್ನು ಮುಂದೆ ಮಾಡುತ್ತೀಯಾ ಎಂದು ಪದೇ ಪದೇ ಪ್ರಶ್ನಿಸಿ, ʻಠಾಕೂರ್ʼ ಎಂದು ಬಲವಂತವಾಗಿ ಕೂಗುವಂತೆ ಬಾಲಕನನ್ನು ಒತ್ತಾಯ ಪಡಿಸಲಾಗುತ್ತದೆ.

ಬಾಲಕನ ಬಳಿ ಗಾಂಜಾ ಮಾರಾಟ ಮಾಡುವಂತೆ ಒತ್ತಾಯಪಡಿಸುವುದು ಮತ್ತೊಂದು ವೀಡಿಯೋದಲ್ಲಿ ದಾಖಲಾಗಿದೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಂತ್ರಸ್ತ ಬಾಲಕ ನೀಡಿದ ದೂರಿನನ್ವಯ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ವೈರಲ್ ವೀಡಿಯೋದಲ್ಲಿರುವ ಘಟನೆಯು ಏಪ್ರಿಲ್ 10 ರಂದು ನಡೆದಿದ್ದು, ಸಂಬಂಧಪಟ್ಟ ಕಾಯ್ದೆಗಳಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ  ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಸಿಂಗ್ ತಿಳಿಸಿದ್ದಾರೆ.

- Advertisement -

ಸಂತ್ರಸ್ತ ಬಾಲಕ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ತಂದೆಯನ್ನು ಕಳೆದುಕೊಂಡ ಬಳಿಕ ತಾಯಿಯ ಜೊತೆ ವಾಸವಾಗಿದ್ದ. ಬಾಲಕನ ಮೇಲೆ ಅಮಾನುಷ ಕೃತ್ಯ ಎಸೆಗಿದವರ ಹೊಲದಲ್ಲಿ ತಾಯಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ತನ್ನ ತಾಯಿಯ ಕೆಲಸದ ವೇತನ ಕೇಳಲು ತೆರಳಿದ್ದ ವೇಳೆ ಹೊಲದ ಮಾಲೀಕರು ಬಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಾಲು ನೆಕ್ಕುವಂತೆ ಬಲವಂತಪಡಿಸಿದ್ದಾನೆ.

Join Whatsapp