ಬಿಜೆಪಿ ಮಹಿಳಾ ಅಭ್ಯರ್ಥಿಯ ಅಧಿಕೃತ ಆಸ್ತಿ 1,400 ಕೋಟಿ ರೂ.

Prasthutha|

ಪಣಜಿ: ಉದ್ಯಮಿ ಶ್ರೀನಿವಾಸ್ ಡೆಂಪೊ ಅವರ ಪತ್ನಿ ಪಲ್ಲವಿ(49) ಡೆಂಪೊ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾಧಿಕಾರಿಯ ಮುಂದೆ ಸಲ್ಲಿಸಿದ 119 ಪುಟಗಳ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ಪತಿ ಶ್ರೀನಿವಾಸ್ ಡೆಂಪೊ ಅವರ ನಿವ್ವಳ ಮೌಲ್ಯ ಸುಮಾರು 1,400 ಕೋಟಿ ರೂಪಾಯಿ ತೋರಿಸಿದ್ದಾರೆ.

- Advertisement -

ಪಲ್ಲವಿ ಅವರು 255.4 ಕೋಟಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಶ್ರೀನಿವಾಸ್ ಒಡೆತನದ ಆಸ್ತಿ ಮೌಲ್ಯ 994.8 ಕೋಟಿ ರೂಪಾಯಿ ಆಗಿದ್ದರೆ, ಪಲ್ಲವಿ ಅವರ ಸ್ಥಿರಾಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ 28.2 ಕೋಟಿ ರೂಪಾಯಿಗಳಾಗಿದೆ. ಪಲ್ಲವಿ ಪತಿ ಶ್ರೀನಿವಾಸ್ ಅವರ ಸ್ಥಿರಾಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ 83.2 ಕೋಟಿ ರೂಪಾಯಿ. ಗೋವಾ ಮತ್ತು ದೇಶದ ಇತರ ಭಾಗಗಳಲ್ಲಿ ಶ್ರೀನಿವಾಸ್ ಡೆಂಪೊ ಅವರು ಆಸ್ತಿಯನ್ನು ಹೊಂದಿರುವುದು ಮಾತ್ರವಲ್ಲ, ದಂಪತಿ ದುಬೈನಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 2.5 ಕೋಟಿ ರೂ. ಲಂಡನ್‌ನಲ್ಲಿಯೂ 10 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಕೂಡ ಅವರಿಗೆ ಇದೆ.

ಅವರು ವಿವಿಧ ಸರಣಿಯ ಮೂರು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊಂದಿದ್ದು, ಅವು ಕ್ರಮವಾಗಿ 1.69 ಕೋಟಿ, 16.42 ಲಕ್ಷ, 21.73 ಲಕ್ಷ ರೂಪಾಯಿ ಆಗಿದೆ. ಅದರೊಂದಿಗೆ 30 ಲಕ್ಷ ರೂಪಾಯಿ ಮೌಲ್ಯದ ಕ್ಯಾಡಿಲಾಕ್ ಕಾರು ಕೂಡ ಹೊಂದಿದ್ದಾರೆ. ಮಹೀಂದ್ರ ಥಾರ್ ಎಸ್‌ಯುವಿ ಇದ್ದು ಇದರ ಬೆಲೆ 16.26 ಲಕ್ಷ ರೂ. ಪಲ್ಲವಿ ಡೆಂಪೊ ಅವರ ಅಫಿಡವಿಟ್ ಪ್ರಕಾರ ಅವರ ಬಳಿ 5.7 ಕೋಟಿ ಮೌಲ್ಯದ ಚಿನ್ನವಿದೆ. ಪಲ್ಲವಿ 2022-23ನೇ ಹಣಕಾಸು ವರ್ಷಕ್ಕೆ 10 ಕೋಟಿ ರೂಪಾಯಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರೆ, ಶ್ರೀನಿವಾಸ್ ಅದೇ ವರ್ಷಕ್ಕೆ 11 ಕೋಟಿ ರೂಪಾಯಿ ರಿಟರ್ನ್ ಸಲ್ಲಿಸಿದ್ದಾರೆ.



Join Whatsapp