ನ್ಯಾಯಾಧೀಶರಿಗೆ ಚೂರಿಯಿಂದ ಇರಿದ ಕಚೇರಿ ಸಹಾಯಕ

Prasthutha|

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಕಚೇರಿ ಸಹಾಯಕನೊಬ್ಬ ಚೂರಿಯಿಂದ ಇರಿದಿರುವ ಘಟನೆ ನ್ಯಾಯಾಧೀಶರ ಕಚೇರಿಯಲ್ಲೇ ನಡೆದಿದೆ.

- Advertisement -

IVನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂ ಪೊನ್ ಪಾಂಡಿ ಅವರ ಮೇಲೆ ಕಚೇರಿ ಸಹಾಯಕ ಎ ಪ್ರಕಾಶ್ ಹಲ್ಲೆ ನಡೆಸಿದ್ದಾನೆ. ನ್ಯಾಯಾಧೀಶರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಸ್ತಂಪಟ್ಟಿ ಪೊಲೀಸರು ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗಷ್ಟೇ ಓಮಲೂರು ನ್ಯಾಯಾಲಯದಿಂದ ವರ್ಗಾವಣೆಯಾಗಿದ್ದ ಪ್ರಕಾಶ್ ಇದರಿಂದ ಅಸಮಾಧಾನಗೊಂಡಿದ್ದ ಎಂದು ಸ್ಥಳೀಯ ಪೊಲೀಸರು ಆರೋಪಿಸಿದ್ದಾರೆ. ತನ್ನ ವರ್ಗಾವಣೆಗೆ ಕಾರಣವೇನು ಎಂದು ಕೇಳಿದ ಪ್ರಕಾಶ್ ಗೆ ʼಪ್ರಧಾನ ಜಿಲ್ಲಾ ನ್ಯಾಯಾಧೀಶರು ವರ್ಗಾವಣೆ ಆದೇಶ ಹೊರಡಿಸಿದ್ದಾರೆʼಎಂದು ನ್ಯಾ. ಪೊನ್ ಪಾಂಡಿ ತಿಳಿಸಿದ್ದರು. ಆದರೆ, ಆನಂತರ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

- Advertisement -

ಧನ್ ಬಾದ್ ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಆನಂದ್, 2021ರ ಜುಲೈನಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ ವಾಹನವೊಂದು ಅನುಮಾನಾಸ್ಪದವಾಗಿ ಡಿಕ್ಕಿ ಹೊಡೆದ ಪರಿಣಾಮ ಮೃತರಾಗಿದ್ದರು. ಅಲ್ಲದೆ ತರುವಾಯ, 2021ರ ಸೆಪ್ಟೆಂಬರ್ ತಿಂಗಳಲ್ಲಿ, ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ಶೂಟೌಟ್ ಸಂಭವಿಸಿತ್ತು, ದರೋಡೆಕೋರ ಜಿತೇಂದರ್ ಗೋಗಿ ಸೇರಿದಂತೆ ಮೂವರು ಮೃತಪಟ್ಟಿದ್ದರು. ನಂತರ ಇದೇ ನ್ಯಾಯಾಲಯದಲ್ಲಿ 2021ರ ಡಿಸೆಂಬರ್ನಲ್ಲಿ, ನ್ಯಾಯಾಲಯದಲ್ಲಿ ಸಣ್ಣ ಸ್ಫೋಟ ಸಂಭವಿಸಿತು ಅಪರಾಧಿಯನ್ನು ನಂತರ ಬಂಧಿಸಲಾಗಿತ್ತು. ಈ ಘಟನೆಗಳ ಬಳಿಕ ನ್ಯಾಯಾಧೀಶರ ಸುರಕ್ಷತೆಯ ವಿಷಯ ನ್ಯಾಯಿಕ ವರ್ಗದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

(ಕೃಪೆ: ಬಾರ್ & ಬೆಂಚ್)

Join Whatsapp