ಶೇ.400ರಷ್ಟು ಏರಿಕೆ ಕಂಡ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ!

Prasthutha|

ನವದೆಹಲಿ: 2020 ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇಕಡಾ 400ರಷ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋದ (NCRB) ಡೇಟಾ ತಿಳಿಸಿದೆ. ಡೇಟಾದ ಪ್ರಕಾರ, 2019 ಕ್ಕಿಂತ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಗಣನೀಯವಾಗಿ ಏರಿಕೆ ಕಂಡಿದೆ. ಹೆಚ್ಚಿನ ಪ್ರಕರಣಗಳಲ್ಲಿ ಲೈಂಗಿಕವಾಗಿ ಅಶ್ಲೀಲ ಕೃತ್ಯದಲ್ಲಿ ಮಕ್ಕಳನ್ನು ಚಿತ್ರಿಸಿರುವುದನ್ನು ಆನ್‌ಲೈನ್ ನಲ್ಲಿ ಪ್ರಕಟಿಸಿದ ಅಥವಾ ಹಂಚಿರುವುದಕ್ಕೆ ಸಂಬಂಧಿಸಿದ್ದಾಗಿದೆ.

- Advertisement -

NCRB ಪ್ರಕಾರ, ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ವರದಿ ಮಾಡಿರುವ ಅಗ್ರ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶ (170), ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಮತ್ತು ಒಡಿಶಾ (71) ಸೇರಿವೆ. ಒಟ್ಟು 842 ಪ್ರಕರಣಗಳಲ್ಲಿ, 738 ಪ್ರಕರಣಗಳು ಮಕ್ಕಳನ್ನು ಆನ್ ಲೈನ್ ಗಳಲ್ಲಿ ಲೈಂಗಿಕ ಅಶ್ಲೀಲವಾಗಿ ಚಿತ್ರಿಸಿರುವ ಪ್ರಕರಣಗಳಾಗಿವೆ ಎಂದು ವರದಿ ತಿಳಿಸಿದೆ.

2019ಕ್ಕೆ ಹೋಲಿಸಿದರೆ ಮಕ್ಕಳ ವಿರುದ್ಧ 164 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದವು. 2018 ರಲ್ಲಿ 117 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು ಮತ್ತು 2017 ರಲ್ಲಿ ಅಂತಹ 79 ಪ್ರಕರಣಗಳು ದಾಖಲಾಗಿದ್ದವು. ಆದರೆ 2020ಕ್ಕೆ ಶೇ 400 ರಷ್ಟು ಅಪರಾಧ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ. ಮಕ್ಕಳು ಅಂತರ್ಜಾಲದಲ್ಲಿ ಶಿಕ್ಷಣ ಮತ್ತು ಇತರ ಸಂವಹನ ಉದ್ದೇಶಗಳಿಗಾಗಿ ಹೆಚ್ಚಿನ ಸಮಯಗಳನ್ನು ಕಳೆಯುತ್ತಿರುವಾಗ ಅನೇಕ ಅಪಾಯಗಳಿಗೆ ಗುರಿಯಾಗುತ್ತಾರೆ. ಕೋವಿಡ್ ಲಾಕ್ ಡೌನ್ ವೇಳೆ ಶಾಲೆಗಳನ್ನು ಮುಚ್ಚಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ್ದು ಅವರು ಅನುಭವಿಸುವ ಅಪಾಯಗಳ ಪ್ರಮಾಣವನ್ನು ಹೆಚ್ಚಿಸಿದೆ ಎಂದು ಹೇಳಿದೆ.



Join Whatsapp