ವೈದೇಹಿಯವರಿಗೆ ನೃಪತುಂಗ ಪ್ರಶಸ್ತಿ ಪ್ರದಾನ

Prasthutha|

ಬೆಂಗಳೂರು: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವ ʻನೃಪತುಂಗʼ ಪ್ರಶಸ್ತಿಯು ಜ್ಞಾನಪೀಠಕ್ಕೆ ಸರಿಸಮಾನವಾದ ಪ್ರಶಸ್ತಿಯಾಗಿದ್ದು, ʻಕನ್ನಡದ ಜ್ಞಾನಪೀಠʼ ಎಂದು ಗುರುತಿಸಿಕೊಂಡ ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದತ್ತಿ ಇಡುವ ಮೂಲಕ ನೀಡುತ್ತಿದೆ. ಏಳು ಲಕ್ಷದ ಒಂದು ರೂಪಾಯಿ ಮೌಲ್ಯದ ಇಂತಹ ಮಹತ್ವದ ಪ್ರಶಸ್ತಿಗೆ ಶ್ರೀಮತಿ ವೈದೇಹಿಯವರ ಪಾತ್ರರಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.

- Advertisement -


ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿʼಯನ್ನು ಹಾಗೂ 2022ನೆಯ ಸಾಲಿನ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂ.ಮ.ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಮಾತನಾಡಿ, ಇವತ್ತಿನ ದಿನಮಾನದಲ್ಲಿ ಪುಸ್ತಕಗಳ ಓದುವ ಪದ್ಧತಿಗಳು ಕಾಣೆಯಾಗುತ್ತಿದೆ. ಸಾರಿಗೆ ಸಂಸ್ಥೆಯಲ್ಲಿ ಇರುವ ಕನ್ನಡ ಕ್ರಿಯಾ ಸಮಿತಿ ಎಲ್ಲರ ಮೆಚ್ಚುಗೆಯ ಸಮಿತಿಯಾಗಿದೆ. ಕನ್ನಡವನ್ನು ಕಲಿಕೆಯಲ್ಲಿ ಆಟದಲ್ಲಿ ದಿನ ನಿತ್ಯದ ವ್ಯವಹಾರದಲ್ಲಿ ಮಕ್ಕಳು ಕನ್ನಡವನ್ನು ನಿರಂತರ ಬಳಸುವಂತಾಗಬೇಕು. ಮಕ್ಕಳಿಗೆ ಕನ್ನಡ ಕಷ್ಟವಾಗುತ್ತಿರುವುದು ಕಂಡು ಬರುತ್ತಿದೆ, ಸರಳ ಕನ್ನಡ ಬಳಸುವ ಕಲಿಸುವ ಪುಸ್ತಕಗಳು ಸಿದ್ಧವಾಗಬೇಕಿದೆ. ಬಾಲ್ಯದಲ್ಲಿಯೇ ಸಮರ್ಥವಾಗಿ ಭಾಷೆ ಕಲಿಸಿದರೆ ಅದರ ನಂಟು ಕೊನೆಯವರೆಗೂ ಇರುತ್ತದೆ ಎಂದು ಹೇಳಿದರು.


ಪ್ರಶಸ್ತಿ ಪ್ರದಾನ ಮಾಡಿದ ಜ್ಞಾನಪೀಠ ಪುರಸ್ಕೃತರು, ಹಿರಿಯ ಸಾಹಿತಿಗಳೂ ಆದ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ನನ್ನ ಜೊತೆ ಜೊತೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿರುವ ಹಿರಿಯ ಸಾಹಿತಿ ವೈದೇಹಿಗೆ ಅಭಿನಂದನೆಗಳು. ನಾವು ಇಂಗ್ಲಿಷ ವ್ಯಾಮೋಹದಲ್ಲಿ ಕನ್ನಡವನ್ನು ಮರೆತು ಹೋಗಿದ್ದೇವೆ. ಮಾತೃಭಾಷೆಯಲ್ಲಿ ಸೃಷ್ಟಿಯಾದ ಸಾಹಿತ್ಯ ಸೃಜನಶೀಲವಾಗಿರುವುದು ಸಾಧ್ಯ. ಅನ್ಯ ಭಾಷೆಯಲ್ಲಿ ಏನೇ ವಿಷಯವನ್ನು ಮಂಡಿಸಿದರೂ ಅದು ಕೇವಲ ಕಂಠಪಾಠ ಮಾತ್ರ ಆಗುವುದು ಸಾಧ್ಯ. ನಮ್ಮ ಸೃಜನಶೀಲತೆ ಉಳಿಯಲು ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೆಕು. ಅದಕ್ಕೆ ನಮ್ಮ ಮಕ್ಕಳಿಗೆ ಕನ್ನಡ ಭಾಷೆಯೇ ಪ್ರಮಾಣವಾಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

- Advertisement -


ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶ ಮೂರ್ತಿ ಮಾತನಾಡಿ, ಮಹಿಳಾ ಸಾಹಿತ್ಯದ ಶ್ರೇಷ್ಠ ಪ್ರತಿನಿಧಿ ಶ್ರೀಮತಿ ವೈದೇಹಿ ಅವರು ಎಂದು ಗುರುತಿಸಿ ಅವರ ಕೊಡುಗೆ ಸಾರಸ್ವತ ಲೋಕಕ್ಕೆ ಅಪಾರ ಎಂದು ಬಣ್ಣಿಸಿದರು.
ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬರಹಗಾರ್ತಿ ವೈದೇಹಿ, ನಮ್ಮ ಕಾಲದಲ್ಲಿ ಮಾತ್ರ ಭಾಷೆಗೆ ಮಹತ್ವವಿತ್ತು ಅದರಲ್ಲಿ ಮಿಂದು ಎದ್ದವರಿಗೆ ಆಡಿಪಾಡಿ ಬೆಳೆದವರಿಗಷ್ಟೇ ಕನ್ನಡದ ಚೆಲವು ಅರಿಯಲು ಸಾಧ್ಯ. ಕನ್ನಡ ನಮ್ಮಲ್ಲಿ ನಿಗಿ ನಿಗಿಯಾಗಿ ಸೇರಿಕೊಂಡಿದ್ದು, ಅದು ಮಾತಿಗೆ, ಬರವಣಿಗೆಗೆ, ಜಗಳಕ್ಕೆ ಜೀವನಕ್ಕೆ ಹೀಗೆ ಎಲ್ಲದಕ್ಕೂ ನಮ್ಮ ಮಧ್ಯದಲ್ಲಿ ಅದು ಹಾಸು ಹೊಕ್ಕಾಗಿ ಹೋಗಿದೆ. ನಾನು ನಾನಾಗಿಯೇ ಬರಹಗಾರ್ತಿ ಆಗಲಿಲ್ಲ, ಕನ್ನಡವನ್ನೇ ನಂಬಿದ ನನಗೆ ಯಕ್ಷಗಾನದ ಕನ್ನಡದ ಜ್ಞಾನ ಶಬ್ಧ ಭಂಡಾರ, ಕುಂದಾಪುರದ ಕುಂದ ಕನ್ನಡ ನನ್ನೊಳಗಿದ್ದ ಬರಹಗಾರ್ತಿಯನ್ನು ಜಾಗೃತಗೊಳಿಸಿತು. ಈ ಕನ್ನಡ ನೆಲವೇ ನನಗೆ ಬರಹಗಾರ್ತಿಯನ್ನಾಗಿ ಮಾಡಿತು. ಆದರೆ ಈಗ ಭಾಷೆ ಎನ್ನುವುದು ಸೌಹಾರ್ದದ ಸೇತುವೆಯಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯವುದು ಹೊಣೆ ನಮ್ಮೆಲರದ್ದು ಎಂಬ ಜವಾಬ್ದಾರಿಯುತ ಮಾತನ್ನು ಹಂಚಿ ಕೊಂಡರು.


ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಹಿರಿಯ ಕವಯತ್ರಿ ಸವಿತಾ ನಾಗಭೂಷಣ, ಕ.ರಾ.ರ.ಸಾ.ಸಂ. ಕೇಂದ್ರ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ, ಮಯೂರ ವರ್ಮ ಪ್ರಶಸ್ತಿ ಪುರಸ್ಕೃತರಾದ ಹಾಸನದ ಬೇಲೂರು ರಘುನಂದನ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೆ.ಭ ರಾಮಲಿಂಗ ಶೆಟ್ಟಿ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು ಕಾರ್ಯಕ್ರಮ ನಿರೂಪಣೆ ಮಾಡಿದರು.

Join Whatsapp