ಸಾಧ್ಯವಿದ್ದರೆ ನನ್ನನ್ನು ಬಂಧಿಸಿ | ನಿತೀಶ್ ಕುಮಾರ್ ಸರಕಾರದ ಹೊಸ ಆದೇಶ ಉಲ್ಲಂಘಿಸಿ ತೇಜಸ್ವಿ ಯಾದವ್ ಸವಾಲು

Prasthutha|

ಪಾಟ್ನಾ : ತಮ್ಮ ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಪೋಸ್ಟ್ ಹಾಕುವವರ ವಿರುದ್ಧ ಸೈಬರ್ ಕ್ರೈಂ ಅಪರಾಧದಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಸೂಚಿಸಿದ್ದಾರೆನ್ನಲಾದ ಬಗ್ಗೆ ವರದಿಯಾಗಿದೆ. ಈ ಆದೇಶಕ್ಕೆ ಪ್ರತಿಕ್ರಿಯಿಸಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಸರಕಾರ ವಿರೋಧಿ ಪೋಸ್ಟ್ ಮಾಡಿ, ಸಾಧ್ಯವಿದ್ದರೆ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದಾರೆ.

- Advertisement -

ನಿತೀಶ್ ಕುಮಾರ್ ಗೆ ಟ್ವಿಟರ್ ನಲ್ಲಿ ಸವಾಲು ಹಾಕಿರುವ ತೇಜಸ್ವಿ ಯಾದವ್, “ಭ್ರಷ್ಟಾಚಾರದ ಭೀಷ್ಮ ಪಿತಾಮಹ” ಎಂದು ದೂರಿದ್ದಾರೆ. “60 ಹಗರಣಗಳ ಸಂಚುಕೋರ ನಿತೀಶ್ ಕುಮಾರ್ ಭ್ರಷ್ಟಾಚಾರದ ಪಿತಾಮಹ, ಕ್ರಿಮಿನಲ್ ಗಳ ರಕ್ಷಕ, ಅನೈತಿಕ ಮತ್ತು ಅಸಂವಿಧಾನಿಕ ಸರಕಾರದ ದುರ್ಬಲ ಮುಖ್ಯಸ್ಥ. ಬಿಹಾರ ಪೊಲೀಸರು ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯವರಿಗೆ ಸವಾಲು ಹಾಕುತ್ತಿದ್ದೇನೆ, ನಿಮ್ಮ ಆದೇಶ ಪ್ರಕಾರ ನನ್ನನ್ನು ಬಂಧಿಸಿ” ಎಂದು ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ.

ತೇಜಸ್ವಿ ಯಾದವ್ ಮುಖ್ಯಮಂತ್ರಿಯನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ. “ಪ್ರತಿಭಟನಕಾರರು ಪ್ರತಿಭಟನೆ ನಡೆಸುವಂತಿಲ್ಲ. ಸರಕಾರದ ವಿರುದ್ಧ ಬರೆಯುವವರನ್ನು ಜೈಲಿಗೆ ಹಾಕಲಾಗುತ್ತದೆ. ಜನರು ತಮ್ಮ ದೂರನ್ನು ಪ್ರತಿಪಕ್ಷದ ನಾಯಕರಲ್ಲಿಗೆ ಕೊಂಡೊಯ್ಯುವಂತಿಲ್ಲ. ನಿತೀಶ್ ಜೀ ನೀವು ಸಂಪೂರ್ಣ ಸೋತಿದ್ದೀರಿ ಎಂಬುದು ನಮಗೆ ಗೊತ್ತಿದೆ, ಆದರೆ ಒಂಚೂರಾದರೂ ನಾಚಿಕೆಯಿರಬೇಕು” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

- Advertisement -

ಸರಕಾರ, ಸಚಿವರು, ಶಾಸಕರು, ಸಂಸದರು, ಸರಕಾರಿ ಅಧಿಕಾರಿಗಳ ವಿರುದ್ಧ ನಿಂದನಾತ್ಮಕ ಮತ್ತು ಅಪರಾಧಿಕ ಹೇಳಿಕೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶವೊಂದರಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಬಿಹಾರದ ಸೈಬರ್ ಕ್ರೈಂ ಆರೋಪಗಳನ್ನು ಪರಿಶೀಲಿಸುವ ಆರ್ಥಿಕ ಅಪರಾಧಗಳ ವಿಭಾಗವು ರಾಜ್ಯದ ಎಲ್ಲಾ ಇಲಾಖೆಗಳಿಗೆ ಈ ಸೂಚನೆ ನೀಡಿದೆ.    



Join Whatsapp