ಸಿಬಿಐ, ಈಡಿಯಂತಹ ಸಂಸ್ಥೆಗಳು ಸ್ವತಂತ್ರವಾಗಿಲ್ಲದಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ : ಬಾಂಬೆ ಹೈಕೋರ್ಟ್

Prasthutha|

ಮುಂಬೈ : ನ್ಯಾಯಾಂಗ ಮತ್ತು ಆರ್ ಬಿಐ, ಸಿಬಿಐ, ಈಡಿಯಂತಹ ಸಂಸ್ಥೆಗಳು ಸ್ವತಂತ್ರ ಸಂಸ್ಥೆಗಳೆಂದು ಪರಿಗಣಿಸಲಾಗುತ್ತದೆ, ಹೀಗಾಗಿ ಅವು ಪಕ್ಷಪಾತ ರಹಿತವಾಗಿರಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

- Advertisement -

ಕಳೆದ ವರ್ಷದ ಅಕ್ಟೋಬರ್ ನಲ್ಲಿ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ) ದಾಖಲಿಸಿರುವ ದೂರನ್ನು ರದ್ದುಗೊಳಿಸುವಂತೆ ಕೋರಿರುವ ಏಕನಾಥ ಖಾಡ್ಸೆ ಅವರ ಅರ್ಜಿಯ ವಿಚಾರಣೆಯ ವೇಳೆ ನ್ಯಾ. ಎಸ್.ಎಸ್. ಶಿಂಧೆ ಮತ್ತು ನ್ಯಾ. ಮನೀಶ್ ಪಿತಾಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಡ್ಸೆ ಪರ ವಕೀಲ ಆಬಾದ್ ಪೊಂಡ ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ತಡೆ ನೀಡುವಂತೆ ನ್ಯಾಯಾಲಯವನ್ನು ವಿನಂತಿಸಿದ್ದಾರೆ. ಖಾಡ್ಸೆ ವಿರದ್ಧ ಸಮನ್ಸ್ ಜಾರಿಯಾಗಿದ್ದ ವೇಳೆ ನಡೆಸಲಾದ ತನಿಖೆಯ ವೀಡಿಯೊ ದಾಖಲೆ ನೀಡುವಂತೆ ಅವರು ಕೋರಿದ್ದಾರೆ.  

- Advertisement -

ಸೋಮವಾರ ವರೆಗೆ ಖಾಡ್ಸೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಈಡಿ ಪರ ವಕೀಲ ಅನಿಲ್ ಸಿಂಗ್ ಕೋರ್ಟ್ ಗೆ ತಿಳಿಸಿದರು. ಆದಾಗ್ಯೂ, ತಮ್ಮ ಹೇಳಿಕೆ ದಾಖಲಿಸುವುದು ಬೇಡ ಎಂದು ಅವರು ವಿನಂತಿಸಿದರು.

“ಅರ್ಜಿದಾರರಿಗೆ ಇನ್ನೂ ಕೆಲವು ದಿನ ರಕ್ಷಣೆ ಕೊಟ್ಟರೆ ಸ್ವರ್ಗ ಏನು ಕೆಳಗೆ ಬೀಳುತ್ತದೆಯೇ? ನ್ಯಾಯಾಂಗ ಮತ್ತು ಆರ್ ಬಿಐ, ಸಿಬಿಐ ಈಡಿಯಂತಹ ಸಂಸ್ಥೆಗಳು ಸ್ವತಂತ್ರವಾಗಿ ಮತ್ತು ಪಕ್ಷಪಾತ ರಹಿತವಾಗಿರ ಬೇಕೆಂದು ನಾವು ಯಾವಾಗಲೂ ಅಂದುಕೊಂಡಿದ್ದೇವೆ” ಎಂದು ನ್ಯಾ. ಶಿಂದೆ ಈ ವೇಳೆ ಹೇಳಿದರು.  

“ಈ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸದಿದ್ದರೆ, ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ” ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತು.

ಮಧ್ಯಂತರ ತಡೆ ರಕ್ಷಣೆ ನೀಡಬಾರದು ಎಂದು ಯಾಕೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಪಟ್ಟು ಹಿಡಿಯುತ್ತೀರಿ? ಎಂದು ನ್ಯಾ. ಶಿಂದೆ ಪ್ರಶ್ನಿಸಿದರು.

ಒಬ್ಬ ವ್ಯಕ್ತಿ ಸಮನ್ಸ್ ಗೆ ಗೌರವ ಕೊಟ್ಟು, ತನಿಖೆಗೆ ಸಹಕರಿಸಲು ಸಿದ್ಧರಿರುವಾಗ, ಬಂಧಿಸುವುದಕ್ಕೆ ಕಾರಣವೇನಿದೆ? ಎಂಬುದಾಗಿ ನಾವು ನಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ನ್ಯಾಯಪೀಠ ತಿಳಿಸಿತು. ಆ ಮೂಲಕ ಖಾಡ್ಸೆ ಅವರ ಬಂಧನದ ತರಾತುರಿಯನ್ನು ನ್ಯಾಯಪೀಠ ಪ್ರಶ್ನಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ಬಿಜೆಪಿ ತೊರೆದು ಖಾಡ್ಸೆ ಎನ್ ಸಿಪಿ ಸೇರಿದ್ದರು. ಅವರ ವಿರುದ್ಧ ಈಡಿ ಸಮನ್ಸ್ ಜಾರಿಗೊಳಿಸಿದ್ದು, ಜ.15ರಂದು ಅವರು ಮುಂಬೈಯ ಈಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಭೂ ಅತಿಕ್ರಮಣ ಕೇಸ್ ಖಾಡ್ಸೆ ವಿರುದ್ಧ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಭೂಮಿ ತಮ್ಮ ಪತ್ನಿ ಮತ್ತು ಅಳಿಯ ಭೂಮಿಯ ಮಾಲಕರಿಂದ ಕಾನೂನು ಪ್ರಕಾರ ಖರೀದಿಸಿರುತ್ತಾರೆ. ಅದರಲ್ಲಿ ಯಾವುದೇ ಪ್ರಕ್ರಿಯೆ ಅಥವಾ ಕಾನೂನಿನಲ್ಲಿ ಅಕ್ರಮ ನಡೆದಿಲ್ಲ ಎಂದು ಖಾಡ್ಸೆ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.   

Join Whatsapp