►59 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನೂರಕ್ಕೂ ಹೆಚ್ಚು ನಕಲಿ ಕೀ ವಶ
ಬೆಂಗಳೂರು: ನಕಲಿ ಬೀಗದ ಕೀ ತಯಾರಿಸಿ ಸಂಚು ರೂಪಿಸಿ ಕಳೆದ 13 ವರ್ಷಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕನ್ನ ಕಳ್ಳ ಮುರಳಿ ಅಲಿಯಾಸ್ ಪ್ರಾಜೆಕ್ಟ್ ಮುರಳಿಯನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 59 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಸೇರಿದಂತೆ ನೂರಕ್ಕೂ ಹೆಚ್ಚು ನಕಲಿ ಕೀಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ನಕಲಿ ಕೀ ತಯಾರಿಕೆಯ ಯಂತ್ರ ಇಟ್ಟುಕೊಂಡಿದ್ದ ಕುಖ್ಯಾತ ಕಳ್ಳ ಪ್ರಾಜೆಕ್ಟ್ ಮುರಳಿ ಜೊತೆಗೆ ಆತನಿಂದ ಕಳವು ಮಾಲುಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದ ಶಿವರಾಮ್ ನನ್ನು ಬಂಧಿಸಲಾಗಿದೆ.
ನಕಲಿ ಕೀಗಳನ್ನು ಬಳಸಿ ಹಗಲು ರಾತ್ರಿ ಕನ್ನ ಕಳವು ಮಾಡುತ್ತಿದ್ದ ಆರೋಪಿಗಳಿಂದ 59 ಲಕ್ಷ ರೂ. ಮೌಲ್ಯದ 1132 ಗ್ರಾಂ ಚಿನ್ನ ಹಾಗೂ 1210 ಕೆ.ಜಿ. ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಕಣ್ಣಳತೆಯಲ್ಲೇ ಕೀ ಲೆಕ್ಕಾಚಾರ ಹಾಕಿ ಅದರಂತೆ ನಕಲಿ ಕೀ ಮಾಡಿಕೊಂಡು ಕನ್ನ ಕಳವು ಮಾಡುತ್ತಿದ್ದ ಪ್ರಾಜೆಕ್ಟ್ ಮುರಳಿಯನ್ನು ಬೆರಳಚ್ಚು ಸಹಾಯದಿಂದ ಪತ್ತೆ ಹಚ್ಚಿ ಬಂಧಿಸಿ ಕಳೆದ 2009ರಿಂದ ಈವರೆಗೆ 14 ಕಡೆ ಕಳ್ಳತನ ಮಾಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದರು.
ಕಳೆದ ಡಿ.7 ರಂದು ಆರ್.ಟಿ.ನಗರದಲ್ಲಿ ನಡೆದಿದ್ದ ಮನೆಕಳವು ಪ್ರಕರಣ ದಾಖಲಿಸಿದ ಆರ್ ಟಿನಗರ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಮತ್ತವರ ಸಿಬ್ಬಂದಿ ಕೃತ್ಯ ನಡೆದ ಸ್ಥಳದ ಅಕ್ಕಪಕ್ಕದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯ ಚಹರೆ ಮತ್ತು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳು ಮುದ್ರೆಗಳನ್ನು ಪಡೆದುಕೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸಿದ್ದಾರೆ ಎಂದು ತಿಳಿಸಿದರು.
ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್ ಮುರಳಿ ಓದಿದ್ದು 7 ನೇ ತರಗತಿ ಮಾತ್ರ. ತಿಂಗಳಲ್ಲಿ ಒಂದೋ ಎರಡೋ ಕಳ್ಳತನ ಮಾಡುತ್ತಿದ್ದು ಉಳಿದ ಸಮಯದಲ್ಲಿ ಗ್ಯಾರೇಜ್ ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದ 13 ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ.
ಶಾಲೆಗೆ ಮಕ್ಕಳನ್ನು ಬಿಡಲು ಬರುವ ಆಭರಣಗಳನ್ನು ಧರಿಸಿದ ಸ್ಥಿತಿವಂತ ಮಹಿಳೆಯರನ್ನು ಗುರುತಿಸಿ ಅವರ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ.
ಶಾಲೆಗೆ ಹೋಗುವಾಗ ಮೊದಲು ಅವರನ್ನು ಹಿಂಬಾಲಿಸಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಎಷ್ಟು ಸಮಯ ಹಿಡಿಯಲಿದೆ ಎಂದು ಲೆಕ್ಕ ಹಾಕಿಕೊಂಡು ಆ ಸಮಯದಲ್ಲೇ ಕಳ್ಳತನ ಮಾಡಲು ಯೋಜನೆ ರೂಪಿಸುತ್ತಿದ್ದ.
ಒಂದು ಮನೆ ಕಳ್ಳತನ ಮಾಡಲು ಸುಮಾರು ಒಂದು ತಿಂಗಳ ಕಾಲ ಯೋಜನೆಯನ್ನು ಹಾಕಿಕೊಂಡು ಮೊದಲಿಗೆ ಮನೆಯ ಮಂದಿ ಬೀಗದ ಕೈ ಬಳಸುವುದನ್ನು ಸೂಕ್ಷ್ಮವಾಗಿ ಗಮನಿಸಿ ಅವರು ಕೈಯಲ್ಲಿ ಬೀಗ ಹಿಡಿಯುವ ದೃಶ್ಯಗಳನ್ನು ಯಾರ ಗಮನಕ್ಕೂ ಬಾರದಂತೆ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ. ಈ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ ಬಳಿಕ ಆ ಮನೆಯ ಬಾಗಿಲ ಕೀ ಮಾದರಿಯ ನಾಲ್ಕೈದು ನಕಲಿ ಕೀ ತಯಾರು ಮಾಡುತ್ತಿದ್ದ. ಈ ಕೃತ್ಯಕ್ಕಾಗಿಯೇ ಆರೋಪಿ ಮುರಳಿ ತನ್ನ ಮನೆಯಲ್ಲಿ ಕೀ ಮೇಕರ್ ಮಿಷನ್ ಇಟ್ಟುಕೊಂಡು ತನ್ನ ಕೈಯಿಂದಲೇ ಕೀ ತಯಾರು ಮಾಡಿ ಮನೆಯವರು ಮಗುವನ್ನು ಶಾಲೆಗೆ ಬಿಟ್ಟು ಬರುವ ಒಳಗೆ ಮನೆಗೆ ನುಗ್ಗಿ ಚಿನ್ನ ಬೆಳ್ಳಿ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ.
ಒಂದು ಬಾರಿ ಕಳ್ಳತನ ಮಾಡಿದ ಮೇಲೆ ಕೆಲ ತಿಂಗಳುಗಳ ಕಾಲ ಮತ್ತೆ ಕಳ್ಳತನ ಮಾಡುವ ಬಗ್ಗೆ ಯೋಚಿಸುತ್ತಿರಲಿಲ್ಲ. ಒಂದೊಂದು ಕಳ್ಳತನವನ್ನೂ ಪ್ರಾಜೆಕ್ಟ್ ರೀತಿ ಪರಿಗಣಿಸಿ ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ 2009 ರಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು ಆಗ ಪೊಲೀಸರು ಮನೆಯಲ್ಲಿ ಬೆರಳಚ್ಚು ಸಂಗ್ರಹಿಸಿ ಶೇಖರಿಸಿದ್ದರು. ವಾರದ ಹಿಂದೆ ಆರ್.ಟಿ. ನಗರ ಪೊಲೀಸರಿಗೆ ಸಿಕ್ಕಿ ಬಿದ್ದ ಈತನ ಬೆರಳಚ್ಚು ಕಳ್ಳತನ ಪ್ರಕರಣದಲ್ಲಿ ಹೊಂದಿಕೆಯಾಗಿದೆ. ಹೆಬ್ಬಾಳ ಪ್ರಕರಣದ ವಿಚಾರಣೆ ಮಾಡುವಾಗ ಒಟ್ಟು 14 ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಅರೋಪಿಯ ಬಂಧನದಿಂದ ಆರ್.ಟಿ.ನಗರ 7 ಹೆಬ್ಬಾಳ 3, ಸಂಜಯನಗರ 2, ಡಿ.ಜೆ. ಹಳ್ಳಿ 2, ಅಮೃತಹಳ್ಳಿ 1 ಸೇರಿದಂತೆ 14 ಪ್ರಕರಣಗಳು ಪತ್ತೆಯಾಗಿರುತ್ತವೆ ಎಂದು ಅವರು ಮಾಹಿತಿ ನೀಡಿದರು.