ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳಿಗೆ ಆಗ್ರಹಿಸಿ ಎಐಟಿಯುಸಿ ಮನವಿ

Prasthutha|

ಮಂಗಳೂರು: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರಿಗೆ ಸೂಕ್ತ ಸವಲತ್ತುಗಳನ್ನು ಸಮಗ್ರವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಎಐಟಿಯುಸಿ ನೇತೃತ್ವದ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಕೋರೆ ಕಾಮಿಕರ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

- Advertisement -

ಪರಿಷ್ಕೃತಗೊಂಡಿರುವ ನಿವೃತ್ತಿ ವೇತನ, ಮದುವೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ ಮತ್ತು ಇತರೆ ಹೆಚ್ಚಾಗಿರುವ ಸಹಾಯ ಧನವನ್ನು ಈ ಕೂಡಲೇ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ನೈಜ ಕಟ್ಟಡ ಕಾರ್ಮಿಕರಿಗೆ ಸ್ವಂತ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ರೂ 5,00,000 ಸಹಾಯ ಧನ ಜಾರಿ ಮಾಡಬೇಕು, ಯಾವುದೇ ತರಹದ ಸಾವು ಸಂಭವಿಸಿದರೂ ಅವಲಂಬಿತ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ. ಆದ್ದರಿಂದ ಸ್ವಭಾವಿಕ ಸಾವಿಗೆ ರೂ 5,00,000 ಮತ್ತು ಅಪಘಾತ ಸಾವಿಗೆ ರೂ 10,00,000 ಪರಿಹಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಕಲ್ಯಾಣ ಮಂಡಳಿಯಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಹಾಗೂ ನೌಕರರನ್ನು ಖಾಯಂ ಗೊಳಿಸಬೇಕು ಮತ್ತು ಮುಂದಿನ ದಿನಗಳಲ್ಲಿ ತೆರವಾದ ಖಾಲಿ ಹುದ್ದೆಗೆ ಮಂಡಳಿಯಿಂದ ವಿದ್ಯಾರ್ಥಿ ಸಹಾಯ ಧನ ಪಡೆದು ಅತಿ ಹೆಚ್ಚು ಅಂಕಗಳಿಸಿದ ನೈಜ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರಥಮ ಆದ್ಯತೆ ನೀಡಬೇಕು, ನೈಜ ಕಟ್ಟಡ ಕಾರ್ಮಿಕ ಕಾರ್ಡ್ ಹೊಂದಿದ ಕಾರ್ಮಿಕನಿಗೆ ರೇಶನ್ ಕಾರ್ಡ್ ಎಪಿಎಲ್/ಬಿಪಿಎಲ್ ಮಾನದಂಡ ಇಲ್ಲದೆ ಆಯುಷ್ಮಾನ್ ಕಾರ್ಡ್ ಮಾಡಲು ಅವಕಾಶ ನೀಡಬೇಕು. ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಮುಖ್ಯಮಂತ್ರಿಯವರಿಗೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ಕಾರ್ಮಿಕ ಇಲಾಖೆಯ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ನೀಡಲಾಯಿತು.

- Advertisement -

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಮಿಕ ಆಯುಕ್ತರು ಕಾರ್ಮಿಕರ ವಾಸ್ತವ ಬೇಡಿಕೆಗಳನ್ನು ಮುಖ್ಯ ಮಂತ್ರಿಯವರಿಗೆ ಹಾಗೂ ಕಲ್ಯಾಣ ಮಂಡಳಿಯ ಗಮನಕ್ಕೆ ತರುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.

ಈ ನಿಯೋಗದಲ್ಲಿ ಎಐಟಿಯುಸಿನ ಜಿಲ್ಲಾ ಅಧ್ಯಕ್ಷ ಹೆಚ್. ವಿ. ರಾವ್, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಕರುಣಾಕರ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ .ಕುಕ್ಯಾನ್, ಎಐಟಿಯುಸಿ ಜಿಲ್ಲಾ ಮುಖಂಡರಾದ ಬಿ. ಶೇಖರ್, ಸುರೇಶ್ ಕುಮಾರ್, ಹರ್ಷಿತ್ ಬಂಟ್ವಾಳ, ದಯಾನಂದ ಕೋಟ್ಯಾನ್, ರಾಮ್ದಾಕಸ್ ಕೂಳೂರು ಮುಂತಾದವರು ಉಪಸ್ಥಿತಿರಿದ್ದರು.

Join Whatsapp