ಯಾವ ವಿದ್ಯಾರ್ಥಿ ಕೂಡ ಉನ್ನತ ಶಿಕ್ಷಣದಿಂದ ಹೊರಗುಳಿಯಬಾರದು: ಡಾ.ವೈ.ಅಬ್ದುಲ್ಲ ಕುಂಞಿ

Prasthutha|

ಮಂಗಳೂರು: ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರಕಬೇಕು. ಮಾಹಿತಿ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಆದ್ದರಿಂದ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ-ಮೀಫ್ ಸದಸ್ಯರು ಯಾವ ವಿದ್ಯಾರ್ಥಿ ಕೂಡ ಉನ್ನತ ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊರಬೇಕು ಎಂದು ಯೆನಪೋಯ ಡೀಮ್ಡ್ ವಿವಿ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ ಸಲಹೆ ನೀಡಿದ್ದಾರೆ.

- Advertisement -

ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ-ಮೀಫ್ ಮಂಗಳೂರಿನ ಪುರಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒಕ್ಕೂಟದ 20ನೇ ವಾರ್ಷಿಕೋತ್ಸವ ಹಾಗೂ ಮೀಫ್ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವು ಮೂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕಲಿಕೆಗೆ ಹೆಚ್ಚಿನ ಒತ್ತು ನೀಡಿದ್ದರಿಂದ ಯುವಕ-ಯುವತಿಯರು ಉನ್ನತ ಹುದ್ದೆಗಳಿಗೆ ಏರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.

- Advertisement -

ಸಾಧನೆ ಮಾಡುವುದು ಸುಲಭವಲ್ಲ. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಸತತ ಪರಿಶ್ರಮ ಮತ್ತು ಶಿಸ್ತನ್ನು ಹೊಂದಾಣಿಕೆ ಮಾಡಿಕೊಂಡರೆ ಯಶಸ್ಸು ಸಿಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕು ಎಂದು ಹೇಳಿದ ಅಬ್ದುಲ್ಲ ಕುಂಞಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿದ್ದ ಕಾನೂನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಹಾಗೂ ಸಂಸ್ಥೆಗಳ ಕಾನೂನುಬದ್ಧ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಮೀಫ್ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.

ಮೀಫ್’ನ ಗೌರವ ಸಲಹೆಗಾರ ಹಾಗೂ ಬ್ಯಾರೀಸ್ ಗ್ರೂಪ್ ಆಫ್ ಇನ್’ಸ್ಟಿಟ್ಯೂಷನ್ಸ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರ ಪಾತ್ರ ಕೂಡ ಮಹತ್ವದ್ದು. ಶಿಕ್ಷಕರು ಸಾಂಪ್ರದಾಯಿಕ ರೀತಿಯಲ್ಲಿ ಪಾಠ ಮಾಡದೆ ಪರಿಣಾಮಕಾರಿ ಮಾದರಿಯನ್ನು ಅನುಸರಿಸಬೇಕು. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅರಿತು ಅವರಿಗೆ ಕಲಿಸಬೇಕು ಎಂದು ಹೇಳಿದರು.

ಬದುಕಿನಲ್ಲಿ ಸಾಧನೆ ಮಾಡಿ ಯಶಸ್ವಿಯಾದ ವ್ಯಕ್ತಿಗಳ ಬಗ್ಗೆ ಸಂಸ್ಥೆಯೊಂದು ಅಧ್ಯಯನ ಮಾಡಿದೆ. ಅದರ ಪ್ರಕಾರ, ಸಾಧಕರಲ್ಲಿ ಹೆಚ್ಚಿನವರು ಗ್ರಾಮೀಣ ಹಿನ್ನೆಲೆ, ಬಡತನದ ಹಿನ್ನೆಲೆ ಹಾಗೂ ಅವರ ಕುಟುಂಬದಲ್ಲಿ ಓರ್ವ ಶಿಕ್ಷಕಿಯ ಹಿನ್ನೆಲೆ ಇರುವುದು ಬೆಳಕಿಗೆ ಬಂದಿದೆ ಎಂದರು.

ನಿಟ್ಟೆ ಡೀಮ್ಡ್ ವಿವಿಯ ಕುಲಪತಿ ಎನ್.ವಿನಯ್ ಹೆಗ್ಡೆ,  ಟೀಕೇಸ್ ಗ್ರೂಪ್ ಅಧ್ಯಕ್ಷ ಉಮರ್ ಟೀಕೆ, ಮಾನವ ಸಂಪನ್ಮೂಲ ವ್ಯಕ್ತಿ ಮಹೇಶ್ ಮಸಲ್, ಉದ್ಯಮಿ ಸಯ್ಯದ್ ಸುಲ್ತಾನ್ ಅಹ್ಮದ್, ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ, ಉಪಾಧ್ಯಕ್ಷರಾದ ಬಿ.ಎಂ.ಮುಮ್ತಾಝ್ ಅಲಿ, ಕೆ.ಎಂ.ಮುಸ್ತಫಾ ಸುಳ್ಯ, ಸಾಬಿಹ್ ಅಹ್ಮದ್ ಖಾಝಿ, ಪದಾಧಿಕಾರಿಗಳಾದ ಬಿ.ಎ.ನಝೀರ್, ಅಬ್ದುಲ್ ರಹ್ಮಾನ್, ರಿಯಾಝ್ ಅಹ್ಮದ್, ಪಿ.ಎ.ಇಲ್ಯಾಸ್, ಬಿ.ಮಯ್ಯದ್ದಿ ಮತ್ತಿತರರು ಪಾಲ್ಗೊಂಡಿದ್ದರು.

ವಿವಿಧ ವಿಚಾರಗೋಷ್ಠಿಗಳು ನಡೆದವು.



Join Whatsapp