ತವಾಂಗ್ ಬಳಿ ಯಾವ ಸೈನಿಕರೂ ಗಂಭೀರವಾಗಿ ಗಾಯಗೊಂಡಿಲ್ಲ: ರಾಜನಾಥ ಸಿಂಗ್

Prasthutha|

ಚರ್ಚೆಗೆ ಅವಕಾಶ ನಿರಾಕರಿಸಿದ ಸರ್ಕಾರದ ನಡೆ ವಿರೋಧಿಸಿ ವಿಪಕ್ಷಗಳಿಂದ ಕಲಾಪ ಬಹಿಷ್ಕಾರ

- Advertisement -

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಬಳಿಯ ಎಲ್’ಎಸಿ- ವಾಸ್ತವ ಗಡಿ ರೇಖೆಯ ಬಳಿ ಚೀನಾ ಸೈನಿಕರ ಒಳನುಗ್ಗುವ ಪ್ರಯತ್ನ  ತಡೆಯುವಲ್ಲಿ ನಮ್ಮ ಸೈನಿಕರು ಯಶಸ್ವಿಯಾಗಿದ್ದಾರೆ. ನಮ್ಮ ಸೈನಿಕರು ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಲೋಕಸಭೆಗೆ ಮಂಗಳವಾರ ತಿಳಿಸಿದ್ದಾರೆ.

ವಿಷಯವನ್ನು ರಾಜತಾಂತ್ರಿಕ ಮಟ್ಟಕ್ಕೆ ಒಯ್ದು ಮಾತುಕತೆ ನಡೆಸುವುದಾಗಿಯೂ ರಾಜನಾಥ ಸಿಂಗ್ ಸಂಸತ್ತಿಗೆ ತಿಳಿಸಿದರು.

- Advertisement -

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುವಾಗ ರಕ್ಷಣಾ ಸಚಿವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹಾಗೂ ಇತರ ಹಿರಿಯ ಸೇನಾಧಿಕಾರಿಗಳ ಜೊತೆಗೆ ಭದ್ರತಾ ವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಸಿದ್ದರು.

ಸಂಸತ್ತಿನ ಎರಡೂ ಸದನಗಳಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಆರ್ ಜೆಡಿ ಮೊದಲಾದ ಪಕ್ಷಗಳವರು, ವಿಷಯ ಪ್ರಸ್ತಾಪಿಸಿ ಈ ಬಗ್ಗೆ ವಿಸ್ತೃತ ಚರ್ಚೆ ನಡಸಬೇಕು ಎಂದು ಒತ್ತಾಯ ಮಾಡಿದರು. ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ಎಂದು ಅವರು ಆಗ್ರಹಿಸಿದರು.

ಆದರೆ ಸರಕಾರ ಚರ್ಚೆಯ ಬಗ್ಗೆ ಆಸಕ್ತಿ ತೋರಲಿಲ್ಲ. ಇದೇ ವಿಷಯವಾಗಿ ರಾಜನಾಥ ಸಿಂಗ್ ಅವರು ರಾಜ್ಯ ಸಭೆಗೂ ತೆರಳಿ ಹೇಳಿಕೆ ನೀಡಿದರು.

ರಕ್ಷಣಾ ಸಚಿವರ ಹೇಳಿಕೆಯ ಮೇಲೆ ಚರ್ಚೆ ಇಲ್ಲ ಎಂದು ಸಭಾಪತಿ ಹೇಳಿದ್ದರಿಂದ ಎಲ್ಲ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ ಕಲಾಪ ಬಹಿಷ್ಕರಿಸಿ ಹೊರ ನಡೆದರು.

ಡಿಸೆಂಬರ್ 7ರಂದು ಆರಂಭವಾದ ಚಳಿಗಾಲದ ಸಂಸತ್ ಅಧಿವೇಶನವು 29ರವರೆಗೆ ನಡೆಯಲಿವೆ.

Join Whatsapp